ಅಡ್ಯಾರ್ ಪದವು ಎಸಿ ಸ್ಪೋಟಗೊಂಡು ಮನೆಗೆ ಅಪಾರ ಹಾನಿ
Sunday, November 2, 2025
ಮಂಗಳೂರು: ನಗರ ಹೊರವಲಯದ ಅಡ್ಯಾರ್ ಪದವು ಎಂಬಲ್ಲಿನ ಮನೆಯೊಂದರಲ್ಲಿ ಭಾನುವಾರ ಸಂಜೆ ಎಸಿ ಸ್ಫೋಟಗೊಂಡು ಅಪಾರ ಹಾನಿ ಸಂಭವಿಸಿದೆ.
ಫೈಝಲ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಕೃತ್ಯ ನಡೆಯುವಾಗ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ಮನೆಗೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ. ಸಂಜೆಯ ವೇಳೆಗೆ ಮನೆಯೊಳಗಿನಿಂದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ತಕ್ಷಣ ಮನೆಯ ಬಾಗಿಲು ಮುರಿದು ಒಳಹೊಕ್ಕು ಬೆಂಕಿ ನಂದಿಸಿರುವುದಾಗಿ ತಿಳಿದು ಬಂದಿದೆ.
ಫೈಝಲ್ ಅವರು ಬೇರೊಂದು ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಈ ಮನೆಯಲ್ಲಿ ಮತ್ತೆ ವಾಸಿಸಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ನಾಲ್ಕೈದು ದಿನದ ಹಿಂದೆ ಎಸಿ ಅಳವಡಿಸಿದ್ದರು ಎನ್ನಲಾಗಿದೆ.
ಸಂಜೆ ಈ ಎಸಿ ಸ್ಪೋಟಗೊಂಡಿದೆ. ಮನೆಯ ಬಾಗಿಲು ಮುಚ್ಚಲ್ಪಟ್ಟ ಕಾರಣ ಹೊಗೆ ಆವರಿಸಿದೆ, ಬೆಂಕಿ ಕಾಣಿಸಿದೆ. ಇದರಿಂದ ಪೀಠೋಪಕರಣಗಳು, ಬಟ್ಟೆಬರೆ, ನಗದು, ಪಾಸ್‌ಪೋರ್ಟ್ ಸಹಿತ ಮನೆಯ ಬೆಲೆ ಬಾಳುವ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.