ಮೊಬೈಲ್ ಬಳಕೆ ಕಡಿಮೆ ಮಾಡಿ ದಿನಕ್ಕೆ 2-3 ಗಂಟೆ ಗ್ರಂಥಾಲಯದ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಿ: ಚಾಮರಾಜೇಂದ್ರ ಹೆಚ್.
ಅವರು ಸೋಮವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025 ರ ಪ್ರಯುಕ್ತ ಜ್ಞಾನ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಂಥಗಳನ್ನು ಓದಿ ವಿಭಿನ್ನ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಜ್ಞಾನ ಮಾರ್ಗದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಗ್ರಂಥಗಳು ನಮ್ಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು
ಉಪನ್ಯಾಸ ನೀಡಿದ ಬಾರ್ಕೂರು ದಾಮೋದರ ಶರ್ಮ, ಗ್ರಂಥಗಳು ಯುವ ಜನತೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಸಾಧನವಾಗಿದೆ. ವಿದ್ಯಾರ್ಥಿಗಳು ಪಾಠ ಪುಸ್ತಕಗಳ ಜೊತೆಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಗ್ರಂಥಾಲಯಗಳಲ್ಲಿರುವ ಅನೇಕ ಸಾಧಕರ ಬದುಕಿನ ಕಥೆಗಳನ್ನು ಸಾರುವ, ಉತ್ತಮ ಸಂದೇಶಗಳನ್ನು ನೀಡುವ ಪುಸ್ತಕಗಳನ್ನು ಓದಿಕೊಂಡು, ಯೋಗ್ಯವಾದ ಯೋಚನೆಯೊಂದಿಗೆ ಬದುಕಿನಲ್ಲಿ ಹೆಜ್ಜೆಗಳನ್ನಿಡಬೇಕು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ, ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕಿ ಗಾಯತ್ರಿ, ಉಡುಪಿ ಜಿಲ್ಲಾ ಕೇಂದ್ರದ ಗ್ರಂಥಾಲಯಾಧಿಕಾರಿ ಮಮತಾ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಸಿಬ್ಬಂದಿ ಸೇವಾ ಪುರಸ್ಕಾರ ಹಾಗೂ ಉತ್ತಮ ಓದುಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗ್ರಂಥಪಾಲಕಿ ಪ್ರಣಿತ ನಿರೂಪಿಸಿ, ಪಾರ್ವತಿ .ಎಂ ವಂದಿಸಿದರು.