ತುರ್ತು ಕರೆ ನೆಪದಲ್ಲಿ ಮೊಬೈಲ್ ಪಡೆದು ಪರಾರಿ
ಮಂಗಳೂರು: ತುರ್ತಾಗಿ ಕರೆ ಮಾಡಬೇಕು ಎಂದು ನಾಟಕವಾಡಿ ಮೊಬೈಲ್ ಕೇಳಿ ಹಿಂದಿರುಗಿಸದೆ ಚಾಲಾಕಿ ಕಳ್ಳನೊಬ್ಬ ಪರಾರಿಯಾದ ಘಟನೆ ಸುರತ್ಕಲ್ ಜಂಕ್ಷನ್ ನಲ್ಲಿ ಭಾನುವಾರ ನಡೆದಿದೆ. ಮನೆ ಮನೆಗೆ ಪತ್ರಿಕೆ ವಿತರಿಸುವ ಕೆಲಸ ಮಾಡುವ ಸ್ಥಳೀಯರಾದ ಮೊಹಮ್ಮದ್ ಇಕ್ಬಾಲ್ ಮೊಬೈಲ್ ಕಳೆದುಕೊಂಡವರು.
ಸುರತ್ಕಲ್ ಜಂಕ್ಷನ್ ಕೆನರಾ ಬ್ಯಾಂಕ್ ಮುಂಭಾಗ ಬೆಳಗ್ಗೆ 4 ಗಂಟೆಯ ಸುಮಾರಿಗೆ ಪತ್ರಿಕೆಯ ಪುರವಣಿಯನ್ನು ಜೋಡಿಸುತ್ತಿದ್ದ ಸಂದರ್ಭ ಅಪರಿಚಿತನೊಬ್ಬ ಸ್ಕೂಟರ್ ನಲ್ಲಿ ಆಗಮಿಸಿ , ತುರ್ತಾಗಿ ಕರೆ ಮಾಡಲಿದೆ, ಮೊಬೈಲ್, ಪರ್ಸ್ ಬಿಟ್ಟು ಬಂದಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದಾನೆ. ಇಕ್ಬಾಲ್ ಅವರು ಕೊಡುವುದಿಲ್ಲ ಎಂದು ಹೇಳಿದರೂ, ಪದೇ ಪದೇ ಅಂಗಲಾಚುತ್ತಾ ನಿಂತಿದ್ದು, ಮಾನವೀಯತೆಯಿಂದ ಕೊಟ್ಟಿದ್ದಾರೆ.
ದೂರವಾಣಿ ನಂಬರ್ ಒತ್ತುವ ನೆಪದಲ್ಲಿ ಮೊಬೈಲ್ ಹಿಂದಿರುಗಿಸದೆ ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾನೆ. ಸಮೀಪದ ಒಳ ರಸ್ತೆಯಲ್ಲಿ ಪರಾರಿಯಾಗುತ್ತಿದ್ದಾಗ ಇಕ್ಬಾಲ್ ಅವರು ಬೆನ್ನಟ್ಟಿದ್ದರೂ ತಪ್ಪಿಸಿಕೊಂಡಿದ್ದಾನೆ. ಅಂದಾಜು ೨೮ ಸಾವಿರ ರೂಪಾಯಿ ಬೆಲೆಬಾಳುವ ಮೊಬೈಲ್ ಆಗಿದ್ದು, ಸುರತ್ಕಲ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.