ಕಾಲುಸಂಕ ಕುಸಿತ: ದೋಣಿಯಲ್ಲಿ ಹೋಗಿ ಪರಿಶೀಲಿಸಿದ ಜಿಲ್ಲಾಧಿಕಾರಿ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ೫೪ರ ಉಳ್ಳಾಲ ಹೊಯಿಗೆ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಕಾಲುದಾರಿಯ ಮೂಲಕ ಸಾರ್ವಜನಿಕರು ಸಂಚರಿಸಲು ಲೋಹದ ಕಾಲುಸಂಕವನ್ನು ಬಹಳ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. 4 ವರ್ಷಗಳ ಹಿಂದೆ ಈ ಸಂಕ ಕುಸಿದು ಬಿದ್ದಿತ್ತು.
ಈ ಪ್ರದೇಶದಲ್ಲಿ ಸುಮಾರು 300ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಕಾಲುಸಂಕದ ಮೂಲಕ ನದಿ ಬದಿಯಲ್ಲಿ ಸಮನಾಂತರವಾಗಿ ನಡೆದು, ನಗರ ಸಂಪರ್ಕಿಸಲು ಹತ್ತಿರವಾಗಿತ್ತು. ಕಾಲುಸಂಕ ಕುಸಿದುಬಿದ್ದು, ಸ್ಥಳೀಯರಿಗೆ ದೈನಂದಿನ ಓಡಾಟಕ್ಕೆ ತೊಂದರೆಯಾಗಿತ್ತು. ಈ ಸಂಕವನ್ನು ದುರಸ್ತಿ ಅಥವಾ ಮರುನಿರ್ಮಾಣ ಮಾಡಲು ಸ್ಥಳೀಯರು ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಅವರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರೊಂದಿಗೆ ಬುಧವಾರ ದೋಣಿಯಲ್ಲಿಯೇ ಕಾಲುಸಂಕ ಇದ್ದ ಸ್ಥಳಕ್ಕೆ ತೆರಳಿ ಸಮಗ್ರವಾಗಿ ಪರಿಶೀಲಿಸಿದರು. ಕಾಲುಸಂಕದ ಪುನರ್ ನಿರ್ಮಾಣ ಅಥವಾ ದುರಸ್ತಿಯ ಬಗ್ಗೆ ಬಗ್ಗೆ ತಾಂತ್ರಿಕ ಅಭಿಪ್ರಾಯ ಪಡೆದು ಶೀರ್ಘದಲ್ಲಿಯೇ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.