ಒಳಚರಂಡಿ ನೀರು ಸಂಸ್ಕರಣಾ ಘಟಕ ಮೇಲ್ದರ್ಜೆಗೆ: ನಂದಿನಿ ನದಿ ನೀರು ಮಾಲಿನ್ಯ ಚರ್ಚೆ
ಮಂಗಳೂರು: ಸುರತ್ಕಲ್ ಮದ್ಯದಲ್ಲಿರುವ ಒಳಚರಂಡಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಹಳೆಯ ತಂತ್ರಜ್ಞಾನದಿಂದ ಕೂಡಿದ್ದು, ಹಲವು ನ್ಯೂನ್ಯತೆಗಳಿವೆ. ಅದನ್ನು ಮೇಲ್ದರ್ಜೆಗೇರಿಸಲು ಅಂದಾಜು ಪಟ್ಟಿ ತಯಾರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಪಡೀಲ್‌ನ ಪ್ರಜಾಸೌಧದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಚೇರಿ ಉದ್ಘಾಟನೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಅಧಿಕಾರಗಳ ಜತೆ ಬೆಳಗ್ಗೆ ನಂದಿನಿ ನದಿ ನೀರು ಮಾಲಿನ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಎಸ್‌ಟಿಪಿ ಜನರೇಟರ್ ಸಮಸ್ಯೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತವಾದಾಗ ತೊಂದರೆಯಾಗುತ್ತಿದೆ. ಹೊಸ ಜನರೇಟರ್ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಫೆಬ್ರವರಿಯೊಳಗೆ ಜನರೇಟರ್ ವ್ಯವಸ್ಥೆ ಆಗಲಿದೆ. ಅಲ್ಲಿಯವರೆಗೆ ಬಾಡಿಗೆ ಆಧಾರದಲ್ಲಿ ಜನರೇಟರ್ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ಎಸ್‌ಟಿಪಿಯನ್ನು ಮೇಲ್ದರ್ಜೆಗೇರಿಸಲು ಅಂದಾಜು ಪಟ್ಟಿ ತಯಾರಿಸಿದ ಬಳಿಕ ನಗರಾಭಿವೃದ್ಧಿ ಸಚಿವರ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಈ ಬಾರಿಯ ಕರಾವಳಿ ಉತ್ಸವವನ್ನು ಅದ್ದೂರಿಯಿಂದ ನಡೆಸಲು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಲಾಗಿದೆ. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸರ್ಫಿಂಗ್, ಬೀಚ್ ಉತ್ಸವದ ಜತೆ ಕರಾವಳಿ ಉತ್ಸವ ನಡೆಸಲು ತಯಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಮೆಕ್ಕೆಜೋಳ ಸಮಸ್ಯೆ ಕುರಿತಂತೆ ಮುಖ್ಯಮಂತ್ರಿ ನೀಡಿರುವ ಪತ್ರ ನೀಡಲಾಗಿದ್ದು, ಅವರು ಸ್ವೀಕರಿಸಿದ್ದಾರೆ. ಅವರಿಂದ ಸ್ಪಂದನೆಯ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ರಾಜ್ಯದ ರೈತರು ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ಸಿಗದೆ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರಕಾರ ಟನ್‌ಗೆ 2,400 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಪಡಿತರ ವ್ಯವಸ್ಥೆಯಲ್ಲಿ ಉಪಯೋಗಿಸುವುದಾದರೆ ಮಾತ್ರವೇ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಮೆಕ್ಕೆಜೋಳ ಪಡಿತರ ವ್ಯವಸ್ಥೆಯಲ್ಲಿ ವಿತರಣೆಯಾಗುತ್ತಿಲ್ಲ. ಇದರಿಂದ ತೊಂದರೆಯಾಗಿದೆ. ಅದಕ್ಕಾಗಿ ಪ್ರಧಾನಿ ಮೋದಿ ಮಧ್ಯ ಪ್ರವೇಶಕ್ಕೆ ಆಗ್ರಹಿಸಲಾಗಿದೆ. ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ ಸೇರಿದಂತೆ ಇತರರು ಈ ವಿಷಯದಲ್ಲಿ ರಾಜ್ಯ ಸರಕಾರವನ್ನು ದೂರುತ್ತಿದ್ದಾರೆ. ಕೇಂದ್ರ ಸರಕಾರ ಬೆಂಬಲ ಬೆಲೆ ನೀಡುವುದು. ಈ ಬಗ್ಗೆ ಜೋಶಿಯವರು ರಾಜಕಾರಣ ಮಾಡುವ ಬದಲು ಬೆಳೆಗಾರರ ಹಿತರಕ್ಷಣೆ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯಬೇಕಿದೆ ಎಂದವರು ಹೇಳಿದರು.
ಸಿಎಂ ಬದಲಾವಣೆ ಕುರಿತಾದ ಚರ್ಚೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಈ ವಿಚಾರದಲ್ಲಿ ಯಾವುದೇ ಅಭಿಪ್ರಾಯ ನೀಡಲು ಬಯಸುವುದಿಲ್ಲ. ಎಐಸಿಸಿ ಅಧ್ಯಕ್ಷರು ಈಗಾಗಲೇ ಅದನ್ನು ಸುಸೂತ್ರವಾಗಿ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು.