ಮಂಗಳೂರು ವಿ.ವಿ.ಯ ಭ್ರಷ್ಟಾಚಾರ ಪ್ರಕರಣಗಳ ಸಮಗ್ರ ತನಿಖೆಗೆ ಸರಕಾರ ತಕ್ಷಣ ವಿಶೇಷ ಸಮಿತಿ, ನಿಯೋಗ ರಚಿಸಲು ಎಬಿವಿಪಿ ಆಗ್ರಹ
ಒಂದೊಮ್ಮೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಪ್ರಮುಖ ಸ್ಥಾನ ಹೊಂದಿತ್ತು. ಆದರೆ ಇಂದಿನ ವಿಶ್ವವಿದ್ಯಾನಿಲಯದ ಸ್ಥಿತಿ ಕಳವಳಕಾರಿ ಆಗಿದ್ದು, ಅಭಿವೃದ್ಧಿ ನಿಂತಿದೆ. 30ಕ್ಕೂ ಹೆಚ್ಚು ಸ್ನಾತಕೋತ್ತರ ವಿಷಯ ವಿಭಾಗಗಳು, ಐದು ಘಟಕ ಕಾಲೇಜುಗಳು, ಅನೇಕ ಅಧ್ಯಯನ ಕೇಂದ್ರಗಳು ಹಾಗೂ ಅಧ್ಯಯನ ಪೀಠಗಳು ಇದ್ದರೂ ವಿಶ್ವವಿದ್ಯಾಲಯವು ತನ್ನ ಮೂಲೋದ್ದೇಶವಾದ ಶೈಕ್ಷಣಿಕ ಸಂವರ್ಧನೆಯನ್ನು ಸಾಧಿಸಲು ವಿಫಲವಾಗಿದೆ. ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರವೇ ವಿವಿಯ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಾನವಿಕ ಶಾಸ್ತ್ರಗಳಾದ ಸಮಾಜಶಾಸ್ತ್ರ, ತುಳು, ಕೊಂಕಣಿ, ಪುರಾತತ್ವ ಮತ್ತು ಇತಿಹಾಸದಂತಹ ಜನಪ್ರಿಯ ವಿಭಾಗಗಳನ್ನೇ ಮಂಗಳೂರು ವಿವಿಯಲ್ಲಿ ಮುಚ್ಚಲಾಗಿದೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, 2024-25ನೇ ಸಾಲಿನಲ್ಲಿ 1876 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಸಂಖ್ಯೆ 1508ಕ್ಕೆ ಇಳಿದಿದೆ. ಮೂಲಸೌಲಭ್ಯಗಳ ಸ್ಥಿತಿ ಇನ್ನೂ ದಯನೀಯವಾಗಿದೆ. ವಿವಿ ಪತ್ರಿಕೋದ್ಯಮ ವಿಭಾಗ ಕಾರ್ಯನಿರ್ವಹಿಸುತ್ತಿಲ್ಲ. ವಿಜ್ಞಾನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ರಾಸಾಯನಿಕ ಸಾಮಗ್ರಿಗಳ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ. ಕೆಲವು ಕಟ್ಟಡಗಳು ಕುಸಿಯುವ ಹಂತಕ್ಕೆ ತಲುಪಿವೆ. ವಿವಿ ಶುಲ್ಕ ಹೆಚ್ಚಾಗಿ, ಸೌಲಭ್ಯ ಕಡಿಮೆಯಾಗಿದೆ. ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರವೇ ಇಂತಹ ಸ್ಥಿತಿಗೆ ಕಾರಣ ಎಂದು ಆಪಾದಿಸಿದರು.
ಮಂಗಳೂರು ವಿವಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಇತ್ತೀಚೆಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಗೆ ವಿವಿ ಬಾಯ್ಬಿಟ್ಟಿರುವುದು ವಿಶ್ವವಿದ್ಯಾನಿಲಯದ ಮೇಲೆ ವಿದ್ಯಾರ್ಥಿಗಳು ಇಟ್ಟಿದ್ದ ನಂಬಿಕೆಯನ್ನು ಸಂಪೂರ್ಣವಾಗಿ ಮಸುಕಾಗಿಸಿದೆ. ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ (ರೂಸಾ) ಯೋಜನೆಯಡಿಯಲ್ಲಿ 2013 ರಿಂದ 2017ರವರೆಗೆ ಮಂಗಳೂರು ವಿಶ್ವವಿದ್ಯಾಲಯವು 20 ಕೋಟಿ ರೂ. ಅನುದಾನ ಪಡೆದಿತ್ತು. ಇದರಲ್ಲಿ 7 ಕೋಟಿಯನ್ನು ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದರೂ, ಅಲ್ಲಿ ಯಾವುದೇ ಹಾಸ್ಟೆಲ್ ನಿರ್ಮಾಣವಾಗದೇ ಹಣ ಮಾತ್ರ ಅಧಿಕಾರಿಗಳ ಕೈಸೇರಿರುವುದು ಬಹಿರಂಗವಾಗಿದೆ. ಅದರ ಬಳಕೆಯ ಪ್ರಮಾಣ ಪತ್ರಕ್ಕಾಗಿ ಸುಳ್ಳು ದಾಖಲೆಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿರುವುದು ಈಗ ವಿಶ್ವವಿದ್ಯಾಲಯದ ಸ್ವಯಂ ಒಪ್ಪಿಗೆಯಿಂದಲೇ ಬೆಳಕಿಗೆ ಬಂದಿದೆ. ಇದಕ್ಕೆ ಮುನ್ನ ಸೋಲಾರ್ ಹಗರಣ, ನಕಲಿ ಬಿಲ್ಲು ಹಗರಣ, ಸಿಸಿ ಕ್ಯಾಮರಾ ಹಗರಣ, ಲೆಕ್ಚರ್ ಕಾಂಪ್ಲೆಕ್ಸ್ ಹಗರಣ, ಅಂತಾರಾಷ್ಟ್ರೀಯ ಹಾಸ್ಟೆಲ್ ಹಗರಣ, ಬೆಳಪು ಕ್ಯಾಂಪಸ್ ಹಗರಣ ನಡೆದಿದೆ. ಹತ್ತು ವರ್ಷಗಳ ಹಿಂದೆ 60 ಕೋಟಿ ರೂ. ಮೊತ್ತದಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಹಾಸ್ಟೆಲ್ ಕಟ್ಟಡ ನಿರ್ಮಾಣ ಕೇವಲ ಹಣ ಲೂಟಿ ಮಾಡಲು ಸೃಷ್ಟಿಸಿದ ಹುನ್ನಾರವಾಗಿ, ಭೂತ ಬಂಗಲೆಯ ರೀತಿ ಸ್ಥಾಪಿತವಾಗಿದೆ. ಈ ಎಲ್ಲಾ ಪ್ರಕರಣಗಳ ಆರೋಪಿಗಳಲ್ಲಿ ಹಲವರು ಇಂದು ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು.
ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ರಮೇಶ್ ಕೆ., ರವಿಚಂದ್ರ, ಎಬಿವಿಪಿ ಜಿಲ್ಲಾ ಸಂಚಾಲಕ್ ಶ್ರೀಜಿತ್ ರೈ, ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮಿ ಉಪಸ್ಥಿತರಿದ್ದರು.
ಮಂಗಳೂರು ವಿವಿಯ ಸಂವರ್ಧನೆ ಮತ್ತು ಸರಿಯಾಗಿರುವ ಸ್ಥಿತಿಗತಿ ಕುರಿತು ಚರ್ಚಿಸಲು ‘ಮಂಗಳೂರು ವಿವಿ ಉಳಿಸಿ’ ವಿದ್ಯಾರ್ಥಿ ಆಂದೋಲನದ ಭಾಗವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಶಿಕ್ಷಣ ತಜ್ಞರೊಂದಿಗೆ ದುಂಡುಮೇಜು ಸಭೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಲಿದೆ ಎಂದು ಸುವಿತ್ ಶೆಟ್ಟಿ ತಿಳಿಸಿದರು.
ಮಂಗಳೂರು ವಿವಿಯಲ್ಲಿ ಕೋರ್ಸ್‌ಗಳನ್ನು ಬಂದ್ ಮಾಡಿರುವುದು ಸರಿಯಲ್ಲ. ಕೋರ್ಸ್‌ಗಳ ಬಗ್ಗೆ ವಿವಿ ಪ್ರಾಧ್ಯಾಪಕರು ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡಿ ವಿದ್ಯಾರ್ಥಿಗಳು ಆಗಮಿಸುವಂತೆ ಮಾಡಬೇಕು. ಖಾಸಗಿ, ಅನುದಾನಿತ, ಸರಕಾರಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಒಂದೇ ಆಗಿರಬೇಕು. -ರಮೇಶ್ ಕೆ., ಸಿಂಡಿಕೇಟ್ ಮಾಜಿ ಸದಸ್ಯರು
ಮಂಗಳೂರು ವಿವಿಗೆ ಸರಕಾರ ಹಣಕಾಸು ನೆರವು ನೀಡಬೇಕು, ಪ್ರಾಧ್ಯಾಪಕರ ನೇಮಕಾತಿ ನಡೆಸಬೇಕು. ಕೋರ್ಸ್‌ಗಳನ್ನು ಮುಚ್ಚುವುದರಿಂದ ಬಡ, ಹಿಂದುಳಿದ, ದಲಿತ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗುತ್ತಾರೆ. -ರವಿಚಂದ್ರ, ಸಿಂಡಿಕೇಟ್ ಮಾಜಿ ಸದಸ್ಯರು