ನಕಲಿ ಉತ್ಪನ್ನಗಳ ವಿರುದ್ಧ ಧ್ವನಿ ಎತ್ತಲು ಗ್ರಾಹಕ ಹಕ್ಕು ಸಹಕಾರಿ: ಸುನಂದ ಕೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಗ್ರಾಹಕ ಜಾಗೃತಿ ಪ್ರಮಾಣಪತ್ರ ಪಾಠ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಬಹುತೇಕ ಗ್ರಾಹಕರು ತಾವು ಖರೀದಿಸುವ ಉತ್ಪನಗಳ ಕುರಿತು ಜಾಗೃತರಾಗಬೇಕಿದೆ. ಯಾವುದೇ ಗ್ರಾಹಕರು ತಾವು ಖರೀದಿ ಮಾಡುವ ಉತ್ಪನ್ನಗಳಿಂದ ಮೋಸ ಹೋದರೆ, ಅದನ್ನು ಪ್ರಶ್ನಿಸುವ ಮೂಲಕ ಗ್ರಾಹಕ ಹಕ್ಕು ಮತ್ತು ಜವಾಬ್ದಾರಿಯನ್ನು ಪ್ರದರ್ಶನ ಮಾಡಬೇಕಿದೆ. ನಕಲಿ ಉತ್ಪನ್ನಗಳ ಮಾರಾಟಕ್ಕೆ ಉತ್ಪಾದಕರನ್ನೇ ಹೊಣೆಗಾರರನ್ನಾಗಿಸಬೇಕಿದೆ. ಭವಿಷ್ಯದಲ್ಲೂ ಇಂತಹ ಜಾಗೃತಿ ಸಮಾಜದಲ್ಲಿ ಎಲ್ಲೆಡೆ ಹರಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ನಾವೆಲ್ಲರೂ ಗ್ರಾಹಕರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಮಾನ್ಯವಾಗಿ ಉತ್ಪನ್ನಗಳನ್ನು ಖರೀದಿಸಿದ ನಂತರ ಯಾವುದೇ ಸಂದೇಹ ಪಡುವುದಿಲ್ಲ. ಉತ್ಪನ್ನದ ಅವಧಿ ಮುಗಿದ ಕೂಡಲೇ ಅವುಗಳನ್ನು ಎಸೆದು ಬಿಡುತ್ತೇವೆ. ಆದರೆ, ಈ ಪಾಠ ಸರಣಿ ಮೂಲಕ ಉತ್ಪನ್ನಗಳ ಕುರಿತು ಪ್ರಶ್ನೆ ಕೇಳಲು, ತಿಳಿದುಕೊಳ್ಳಲು ಮತ್ತು ತನಿಖೆ ಮಾಡುವ ಜ್ಞಾನವನ್ನು ಒದಗಿಸುತ್ತದೆ ಎಂದು ತಿಳಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಯತೀಶ್ ಕುಮಾರ್ ಪ್ರಾಸ್ತವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಪ್ರೊ. ಅಬ್ಬೋಕರ್ ಸಿದ್ಧಿಕ್, ಪ್ರೊ. ಜಗದೀಶ್, ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸುನಂದಾ ಡಿ., ವಾಣಿಜ್ಯ ವಿಭಾಗದ ಉಪನ್ಯಾಸಕ ಕಾರ್ತಿಕ್ ಪೈ, ಪುನೀತ್ ಉಪಸ್ಥಿತರಿದ್ದರು.