ಸಹಜ ಆರೋಗ್ಯಕ್ಕಾಗಿ ಯೋಗ, ಪ್ರಕೃತಿ ಚಿಕಿತ್ಸೆ ಅಗತ್ಯ: ಡಾ. ಅಭಿಜ್ಞಾ ರೈ
Tuesday, November 18, 2025
ಮಂಗಳೂರು: ಪ್ರಾಚೀನ ಕಾಲದಲ್ಲಿ ಆರೋಗ್ಯಕ್ಕಾಗಿ ಸಹಜ ಪ್ರಕೃತಿ ಚಿಕಿತ್ಸೆಯನ್ನು ಅವಲಂಬಿಸುತ್ತಿದ್ದರು. ಮೊದಲು ಆಯುರ್ವೇದ ಇತ್ಯಾದಿ ಚಿಕಿತ್ಸಾ ಪದ್ಧತಿಯ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರೆ, ಈಗ ಆಲೋಪತಿ ಪದ್ದತಿಯ ಮೂಲಕ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಆಲೋಪತಿ ಚಿಕಿತ್ಸಾ ವಿಧಾನದಿಂದ ಆರೋಗ್ಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು ಎಂದು ನಿಟ್ಟೆಯ ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ಸಂಶೋಧನಾ ಕೇಂದ್ರ ಮತ್ತು ಬಿಎನ್‌ವೈಎಸ್, ಎಂಡಿ, ಪಿಜಿಸಿ ಎಸಿಯ ಸಹಾಯಕ ಪ್ರಾಧ್ಯಾಪಕಿ ಹಾಗೂ ಉಸ್ತುವಾರಿ ಡಾ. ಅಭಿಜ್ಞಾ ರೈ ಹೇಳಿದರು.
ಅವರು ಇತ್ತೀಚೆಗೆ ರಾಮಕೃಷ್ಣಮಠ, ದೇಲಂಪಾಡಿ ಯೋಗ ಪ್ರತಿಷ್ಠಾನ, ಮಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ಎರಡು ವಾರಗಳ ಕಾಲ ನಡೆದ ಇಂಟರ್‌ನ್ಯಾಷನಲ್ ನಾಚುರೋಪತಿ ದಿನಾಚರಣೆಯ ಅಂಗವಾಗಿ ಯೋಗ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರೋಗಿಗೆ ಕಾಯಿಲೆ ಉಲ್ಬಣವಾದಾಗ ನೀಡುವ ಅಗತ್ಯದ ಔಷಧಿಯೊಂದಿಗೆ ಅಗತ್ಯದ ಶಸ್ತ್ರಚಿಕಿತ್ಸೆಯಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿ ಆರೋಗ್ಯ ಕಾಪಾಡುವಲ್ಲಿ ಆಲೋಪತಿ ಚಿಕಿತ್ಸೆ ಪಾತ್ರ ವಹಿಸುತ್ತದೆ. ಅಗತ್ಯವಿದ್ದಲ್ಲಿ ಆಲೋಪತಿ ಚಿಕಿತ್ಸೆ ಉಪಯುಕ್ತ. ಆದರೆ ಈಗ ಪ್ರತಿಯೊಂದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ಮಾತ್ರೆಗಳ
ಸೇವೆನೆಯಾಗುತ್ತಿರುವುದು ಕಂಡುಬರುತ್ತಿದ್ದು, ನಿತ್ಯ ಉಪಯೋಗಿಸಲೇಬೇಕಾದ ಶುಂಠಿ, ಮಜ್ಜಿಗೆ, ಬೆಳ್ಳುಳ್ಳಿ, ಲಿಂಬೆಹಣ್ಣು, ಜೇನುತುಪ್ಪ (ಪ್ರಾಕೃತಿಕ ಆಹಾರ) ಇತ್ಯಾದಿಗಳಿಂದ ಖಂಡಿತವಾಗಿಯೂ ಉತ್ತಮ ಆರೋಗ್ಯ ಬರುತ್ತದೆ ಎಂದರು.
ಹಿಂದಿನ ಕಾಲದವರ ಪ್ರಾಚೀನ ಸಹಜ ಪ್ರಕೃತಿ ಚಿಕಿತ್ಸೆಯ ಬಗ್ಗೆ ಅರಿವನ್ನು ಇನ್ನು ಹೆಚ್ಚು ಮೂಡಿಸಲು ಈ ಒಂದು ಯೋಗ ಪ್ರಕೃತಿ ಚಿಕಿತ್ಸಾ ತುಂಬಾ ಪ್ರಯೋಜನಕಾರಿಯಾಗಲಿದೆ. ಹೆಚ್ಚಿನ ಆರೋಗ್ಯ ಸಮಸ್ಯೆಯು ನಮ್ಮ ಮನಸ್ಸಿನ ದೋಷದಿಂದಲೇ ಉಂಟಾಗುತ್ತದೆ. ನಾವು ನಮ್ಮ ಮನಸ್ಸಿಗೆ ಯಾವಾಗಲೂ ಒಳ್ಳೆಯ ಆಹಾರ ನೀಡಬೇಕು. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಸಹಜವಾಗಿ ನಮ್ಮ ಆರೋಗ್ಯ ಉತ್ತಮಗೊಳ್ಳುವುದು. ಹಾಗೂ ಇದರೊಂದಿಗೆ ದೇಹಕ್ಕೆ ಸತ್ವಯುತವಾದ ಸಾತ್ವಿಕ ಆಹಾರ ನೀಡಬೇಕು. ರಾಸಾಯನಿಕ ಮಿಶ್ರಣ ಆಹಾರ, ಜಂಕ್‌ಫುಡ್ ಸೇವನೆ ಬೇಡ. ಹಸಿವಾಗದೇ ಊಟ ಮಾಡಬೇಡಿ, ಬಾಯಾರಿಕೆಗೆ ಸಹಜ ಶುದ್ಧ ನೀರನ್ನು ಸೇವಿಸಿ. ಈ ಔಷಧ ರಹಿತ ಚಿಕಿತ್ಸೆ ಜೀವನವನ್ನು ಆರೋಗ್ಯಪೂರ್ಣವಾಗಿ ನಡೆಸಲು ಯಾವ ತೆರನಾಗಿ ಬದಲಾಯಿಸಬೇಕು ಮತ್ತು ಅದರಲ್ಲಿ ಯಾವ ವಿಭಾಗಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಮಾತನಾಡಿ, ಯೋಗ ಕೂಡಾ ನಾಚುರೋಪತಿ ಜೊತೆಯಲ್ಲಿ ಸಾಗುತ್ತಿದ್ದು, ಯೋಗದ ಮೂಲಕ ಆರೋಗ್ಯ ಜೀವನ ಮಾರ್ಗವನ್ನು ಜನತೆಗೆ ನಿತಂತರವಾಗಿ ಸದಾ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ನವೀನ್‌ರವರು ಉಪಸ್ಥಿತರಿದ್ದರು. ಚಂದ್ರಹಾಸ್ ಬಾಳ ಪ್ರಾರ್ಥನೆ ಹಾಡಿದರು. ಕಾರ್ತಿಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಶೀಲಾ ಕುಮಾರಿ ವಿ. ವಂದಿಸಿದರು. ನೀನಾ ಪೈ, ಸುಮಾ ಶೆಟ್ಟಿ, ವೀಣಾ ಮಾರ್ಲ, ನೀತಾ ಶೆಟ್ಟಿ, ಭಾರತಿ ರಾವ್ ಕಾರ್ಯಕ್ರಮ ನಡೆಸಲು ಸಹಕಾರ ನೀಡಿದರು.






