ಆಧುನಿಕ ಭಾರತ ನಿರ್ಮಿಸುವಲ್ಲಿ ನೆಹರೂ ಅವರ ಕೊಡುಗೆ ಅಪಾರ: ಬಿ. ರಮಾನಾಥ ರೈ

ಆಧುನಿಕ ಭಾರತ ನಿರ್ಮಿಸುವಲ್ಲಿ ನೆಹರೂ ಅವರ ಕೊಡುಗೆ ಅಪಾರ: ಬಿ. ರಮಾನಾಥ ರೈ


ಮಂಗಳೂರು: ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಾರಂಭಿಸಿ ಆಧುನಿಕ ಭಾರತ ನಿರ್ಮಿಸುವಲ್ಲಿ ನೆಹರೂ ಅವರು ನೀಡಿದ ಕೊಡುಗೆ ಅಪಾರ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.


ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರ 136ನೇ ಜನ್ಮ ದಿನಾಚರಣೆ ಪ್ರಯುಕ್ತ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ನೆಹರೂ ಮೈದಾನದಲ್ಲಿ ನೆಹರೂ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಬಳಿಕ ಅವರು ಮಾತನಾಡುತ್ತಿದ್ದರು.


ದ.ಕ. ಜಿಲ್ಲೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ಸೇತುವೆಗಳು, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಶ್ರೀನಿವಾಸ ಮಲ್ಯ ಕೊಡುಗೆ ಅಪಾರ. ಆದರೆ ಈ ಎಲ್ಲ ಅಭಿವೃದ್ಧಿಯಲ್ಲಿಯೂ ನೆಹರೂರವರ ಕೊಡುಗೆ ಬಹಳ ಹಿರಿದಾಗಿದೆ. ಅಂತಹ ನೆಹರೂರವರ ಹೆಸರನ್ನು ಈ ಮೈದಾನಕ್ಕೆ ಇಡಲಾಗಿದೆ. ಆದರೆ ಬಿಜೆಪಿಗರು ಈ ಮೈದಾನವನ್ನು ಕೇಂದ್ರ ಮೈದಾನ ಎಂದು ಕರೆಯುತ್ತಾರೆ. ಖಂಡಿತವಾಗಿಯೂ ಅವರು ದೇಶ ಪ್ರೇಮಿಗಳಲ್ಲ. 14 ವರ್ಷಗಳ ಕಾಲ ಸೆರವಾಸ ಅನುಭವಿಸಿ ಗಾಂಧಿ ಮಾರ್ಗದಲ್ಲಿ ನಡೆದು ನಂತರ ಪ್ರಥಮ ಪ್ರಧಾನಿಯಾಗಿ ಭವ್ಯ ದೇಶವನ್ನು ಕಟ್ಟಿದ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಸ್ಮರಿಸಿದರು.


ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ಭಾರತದ ಸಮಗ್ರ ಅಭಿವೃದ್ಧಿಗೆ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಮೂಲಕ ನವಭಾರತ ನಿರ್ಮಾಣಕ್ಕೆ ಜವಾಹರಲಾಲ್ ನೆಹರೂ ಅವರ ಕೊಡುಗೆ ಸ್ಮರಣೀಯ. ನೆಹರೂ ಅವರು ಪ್ರಧಾನಿಗಳಾಗಿದ್ದ 17 ವರ್ಷಗಳ ಅವಧಿಯಲ್ಲಿ ಅನೇಕ ಅಣೆಕಟ್ಟು, ಸಾರ್ವಜನಿಕ ವಲಯದಲ್ಲಿ ಕೈಗಾರಿಕೆ, ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದರು. ಆರ್ಥಿಕತೆಯಲ್ಲಿ ಜಗತ್ತಿನಲ್ಲಿ ೪ನೇ ಸ್ಥಾನದಲ್ಲಿದ್ದರೆ ಅದಕ್ಕೆ ನೆಹರೂ ಅವರೇ ಕಾರಣ. ದೇಶದ ಬಹುತೇಕ ಐಐಟಿಗಳು, ಸಂಶೋಧನಾ ಸಂಸ್ಥೆಗಳು ದೇಶ ಸ್ವಾತಂತ್ರ್ಯ ಗಳಿಸಿದ ಮೊದಲ 15 ವರ್ಷಗಳಲ್ಲಿ ನಿರ್ಮಾಣವಾಗಿವೆ. ಆದರೆ ಇಂದು ನೆಹರೂ ಕುಟುಂಬದ ಕೊಡುಗೆ, ಇತಿಹಾಸ ಮರೆಮಾಚುವ ಕೆಲಸ ಆಗುತ್ತಿದೆ ಎಂದರು.


ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್ ಲೋಬೊ ಮಾತನಾಡಿದರು. 


ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ, ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ, ಮುಖಂಡರಾದ ಕೆ. ಹರಿನಾಥ್, ಪ್ರಕಾಶ್ ಸಾಲ್ಯಾನ್, ಇಬ್ರಾಹೀಂ ನವಾಝ್, ಎಸ್. ಅಪ್ಪಿ, ಶಾಹುಲ್ ಹಮೀದ್, ಸುದರ್ಶನ್ ಜೈನ್, ದಿನೇಶ್ ಮುಳೂರು, ಡೆನ್ನಿಸ್ ಡಿಸಿಲ್ವ, ಮಂಜುಳಾ ನಾಯಕ್, ಪ್ರೇಮ್ ಬಳ್ಳಾಲ್ ಭಾಗ್, ಅಲಿಸ್ಟರ್ ಡಿಕುನ್ಹ, ಸುಹಾನ್ ಆಳ್ವ, ವಿಕಾಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಮೇಯರ್ ಶಶಿದರ್ ಹೆಗ್ಡೆ ವಂದಿಸಿದರು. ಜೋಕಿಂ ಡಿಸೋಜಾ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article