ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮಂಗಳೂರಿನ ಜಯಶ್ರೀ ಉಳ್ಳಾಲ್ ಹೆಸರು
Tuesday, November 18, 2025
ಮಂಗಳೂರು: ಹುರುನ್ ರೀಸರ್ಚ್ ಪ್ರಕಟಿಸಿದ ಇಂಡಿಯಾ ರಿಚ್ ಲಿಸ್ಟ್ 2025 ರ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮಂಗಳೂರಿನಲ್ಲಿ ಜನಿಸಿದ ಟೆಕ್ ಲೀಡರ್ ಜಯಶ್ರೀ ಉಳ್ಳಾಲ್ ಅವರು 50,070 ಕೋಟಿ ರೂ. ಸಂಪತ್ತಿನೊಂದಿಗೆ ಅಗ್ರಸ್ಥಾನ ಗಳಿಸಿದ್ದಾರೆ. ಜಯಶ್ರೀ ಉಳ್ಳಾಲ್ 2008 ರಿಂದ ಕಂಪ್ಯೂಟರ್ ನೆಟ್‌ವರ್ಕಿಂಗ್ ಸಂಸ್ಥೆಯಾದ ಅರಿಸ್ಟಾ ನೆಟ್‌ವರ್ಕ್‌ನ ಅಧ್ಯಕ್ಷೆ ಮತ್ತು ಸಿಇಒ ಆಗಿದ್ದಾರೆ.
ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯಾದ ಅರಿಸ್ಟಾ ನೆಟ್‌ವರ್ಕ್ ಕಳೆದ ವರ್ಷ 7 ಬಿಲಿಯನ್ ಡಾಲರ್‌ಗಳ ಆದಾಯವನ್ನು ದಾಖಲಿಸಿದ್ದು, ಹಿಂದಿನ ವರ್ಷಕ್ಕಿಂತ ಶೇ.20 ರಷ್ಟು ಹೆಚ್ಚಳವಾಗಿದೆ.
ಜಯಶ್ರೀ ಉಳ್ಳಾಲ್ ಅವರು 5 ವರ್ಷಗಳ ಹಿಂದೆ ಸಾರ್ವಜನಿಕವಾಗಿ ಬಿಡುಗಡೆಯಾದ ಕೌಡ್ ಕಂಪ್ಯೂಟಿಂಗ್ ಕಂಪನಿಯಾದ ಸ್ನಪ್ಲೇಕ್ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ ಮತ್ತು ಅವರು ಅರಿಸ್ಟಾದ ಸುಮಾರು 3 ಪ್ರತಿಶತದಷ್ಟು ಷೇರುಗಳನ್ನು ಹೊಂದಿದ್ದಾರೆ, ಅದರಲ್ಲಿ ಕೆಲವು ಅವರ ಇಬ್ಬರು ಮಕ್ಕಳು, ಸೊಸೆ ಮತ್ತು ಸೋದರಳಿಯರಿಗೆ ಮೀಸಲಾಗಿವೆ. ಫೋರ್ಟ್ಸ್ ಪ್ರಕಾರ, ಅವರು ಈ ಹಿಂದೆ ಸಿಸ್ಕೋ ಸಿಸ್ಟಮ್ಸ್, ಸೆಮಿಕಂಡಕ್ಟರ್ ಸಂಸ್ಥೆ ಅಡ್ವಾನ್ಸ್ ಮೈಕ್ರೋ ಡಿವೈಸಸ್ ಮತ್ತು ಫೇರ್ಚೈಲ್ಡ್ ಸೆಮಿಕಂಡಕ್ಟರ್‌ನಲ್ಲಿ ಸೇವೆ ಸಲ್ಲಿಸಿದ್ದರು.
ಜಯಶ್ರೀ ಉಳ್ಳಾಲ್ ಅವರು ಗೌಡ ಸಾರಸ್ವತ ಬ್ರಾಹ್ಮಣರಲ್ಲಿ ಸ್ಮಾರ್ತ ಸಂಪ್ರದಾಯವನ್ನು ಅನುಸರಿಸುತ್ತಿರುವ ಮಂಗಳೂರು ಮೂಲದ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರಾಗಿದ್ದಾರೆ.