ಮಾಧ್ಯಮಗಳು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯಬೇಕು: ಕೆ.ವಿ. ಪ್ರಭಾಕರ್

ಮಾಧ್ಯಮಗಳು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿಯಬೇಕು: ಕೆ.ವಿ. ಪ್ರಭಾಕರ್


ಮಂಗಳೂರು: ಮಾಧ್ಯಮಗಳು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯಬೇಕು. ಸಮಾಜದಲ್ಲಿ ಮೌಢ್ಯವನ್ನು ಬಿತ್ತುವ ಕೆಲಸ ಮಾಡಬಾರದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು.

ಅವರು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ  ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತ್ರಿ ಕೋಶ ವಿಭಾಗದ ವತಿಯಿಂದ ಶನಿವಾರ ಹಮ್ಮಿಕೊಂಡ ರಾಷ್ಟ್ರೀಯ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.


ಆಧುನಿಕ ಕಾಲಘಟ್ಟದಲ್ಲಿ ಸುಳ್ಳು ಸುದ್ದಿ, ಊಹಾ ಪತ್ರಿಕೋದ್ಯಮ ವೇಗವಾಗಿ ಹರಡುತ್ತದೆ. ಈ ರೀತಿಯ ಪತ್ರಿಕೋದ್ಯಮ ಸಮಾಜದಲ್ಲಿ ವಿಭಜನೆ ಅಭದ್ರತೆಗೆ ಕಾರಣವಾಗುತ್ತಿದೆ.ಮಾಧ್ಯಮ ಗಳು ಜನರು ಮತ್ತು ಸರಕಾರದ ನಡುವೆ ರಾಯಭಾರಿ ಗಳಂತೆ ಕಾರ್ಯ ನಿರ್ವಹಿಸಬೇಕಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಕಾಲದಲ್ಲಿ ಮುಂಚೂಣಿಯಲ್ಲಿದ್ದ ಅಭಿವೃದ್ಧಿ ಪತ್ರಿಕೋದ್ಯಮ ಕಳೆಗುಂದುತ್ತಿದೆ ಎಂದರು.

ಇಂದಿನ ಸುದ್ದಿ ಪ್ರಸಾರದ ಧಾವಂತದಲ್ಲಿ, ಡಿಜಿಟಲ್ ಮಾಧ್ಯಮಗಳ ಕಾಲಘಟ್ಟದಲ್ಲಿ ಪತ್ರಿಕೋದ್ಯಮದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದೇ ಒಂದು ಸವಾಲಾಗಿದೆ.ಪತ್ರಕರ್ತರಿಗೆ ಸಮಾಜ ವನ್ನು ತಿದ್ದುವ ಅವಕಾಶವಿದೆ.ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗದಂತೆ ಪತ್ರಕರ್ತರು ಎಚ್ಚರ ವಹಿಸಬೇಕಾಗಿದೆ. 1966 ರ ನವೆಂಬರ್ 16 ರಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ರಚನೆಯಾದ ಹಿನ್ನೆಲೆಯಲ್ಲಿ ಆ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ  ಎಂದು ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.

ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಭವಿಷ್ಯದ ಮಾಧ್ಯಮಗಳು ಎಂಬ ವಿಷಯದ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಪುಷ್ಪರಾಜ್ ಬಿ.ಎನ್. ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣಪತಿ ಗೌಡ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯ ನಿರ್ದೇಶಕ ಖಾದರ್ ಶಾ, ಮಂಗಳೂರು ರೋಟರಿ ಸೆಂಟ್ರಲ್ ಘಟಕದ ಅಧ್ಯಕ್ಷ ಭಾಸ್ಕರ ರೈ ಕಟ್ಟ,  ಕರ್ನಾಟಕ ಸೆಣಬು ನಿಗಮ ಅಧ್ಯಕ್ಷ ನಟರಾಜ್, ರಾಜ್ಯ ಬಾಲಭವನ ಸಮಿತಿಯ ಅಧ್ಯಕ್ಷ  ಬಿ.ಆರ್ ನಾಯ್ಡು, ಉಪಸ್ಥಿತರಿದ್ದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸುರೇಶ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article