ರಥಬೀದಿ ಕಾಲೇಜಿನಲ್ಲಿ ಅಂತರ್-ಕಾಲೇಜು ಚೆಸ್ ಪಂದ್ಯಾಟ
Wednesday, November 5, 2025
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಸರಕಾರಿ ಕಾಲೇಜು ಚೆಸ್ ಪಂದ್ಯಾಟ ‘ಚದುರಂಗ’ 2025-26ನ್ನು ಕರ್ನಾಟಕ ರಾಜ್ಯ ಅಂಡರ್ 15 ಮತ್ತು ಅಂಡರ್ 19 ಚೆಸ್ ಚಾಂಪಿಯನ್ ಆರುಷಿ ಸೆವೆರನ್ ಹೆಲೆನ್ ಡಿ’ಸಿಲ್ವ ಪಂದ್ಯಾಟವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ವಹಿಸಿದ್ದರು.
ಡೆರಿಕ್ ಚೆಸ್ ತರಬೇತಿ ಸಂಸ್ಥೆಯ ಸ್ಥಾಪಕ ಡೆರಿಕ್ ಪಿಂಟೊ, ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಐಕ್ಯೂಎಸಿ ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಅಪರ್ಣ ಆಳ್ವ ಎನ್., ಕ್ರೀಡಾ ಕಾರ್ಯದರ್ಶಿಗಳಾದ ಹೃನ್ಮ ಮತ್ತು ಕೌಶಿಕ್ ಆರ್. ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕಿ ಹಾಗೂ ಸಂಚಾಲಕಿ ಶುಭ ಕೆ.ಹೆಚ್. ಸ್ವಾಗತಿಸಿದರು. ವಿದ್ಯಾರ್ಥಿನಿಗಳಾದ ಲತಿಕಾ ನಿರೂಪಿಸಿ, ತೇಜಸ್ವಿನಿ ವಂದಿಸಿದರು.
ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತ 17 ಸರ್ಕಾರಿ ಕಾಲೇಜುಗಳ ಪುರುಷ ಮತ್ತು ಮಹಿಳಾ ಚೆಸ್ ತಂಡಗಳು ಭಾಗವಹಿಸಿದ್ದು, ಸಮಗ್ರ ಪ್ರಥಮ ಸ್ಥಾನವನ್ನು ಅತಿಥೇಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು, ದ್ವಿತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ತೃತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಹಾಗೂ ನಾಲ್ಕನೇ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಪಡೆದುಕೊಂಡಿತು.
