ಅಟಿಲ್ನಿಂದ ಉತ್ತಮ ಶಿಕ್ಷಣ ನೀಡಲು ಸಾಧ್ಯ: ಅರವಿಂದ್ ಬೋಳಾರ್

ಅಟಿಲ್ನಿಂದ ಉತ್ತಮ ಶಿಕ್ಷಣ ನೀಡಲು ಸಾಧ್ಯ: ಅರವಿಂದ್ ಬೋಳಾರ್


ಮಂಗಳೂರು: ಅಟಿಲ್ ಮೂಲಕವೂ ಉತ್ತಮ ಶಿಕ್ಷಣ ನೀಡಲು ಸಾಧ್ಯವಿದೆ. ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರಕ್ರಮವೇ ಮೂಲ ಎಂದು ತುಳುನಾಡ ಮಾಣಿಕ್ಯ ಹಾಗೂ ನಟ ಅರವಿಂದ್ ಬೋಳಾರ್ ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಪ್ರವಾಸೋದ್ಯಮ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಟಿಲ್-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಹಾರ ಸೇವನೆ ಮಾತ್ರವಲ್ಲದೇ, ಅದನ್ನು ತಯಾರಿಸುವ ಕ್ರಮಗಳ ಮಾಹಿತಿಯೂ ಇರಬೇಕು. ಹಾಗಾಗಿ, ಅಡುಗೆಗೆ ಹಾಕುವ ಪದಾರ್ಥ ಹಾಗೂ ಅವುಗಳ ಪ್ರಯೋಜನದ ಕುರಿತು ಅರಿವಿರಬೇಕು. ಆಗಲೇ ಇಡೀ ಮನೆಯ ಸದಸ್ಯರನ್ನು ಚೆನ್ನಾಗಿ ಆರೈಕೆ ಮಾಡಲು ಸಾಧ್ಯವಾಗುತ್ತದೆ. ಪ್ರೀತಿಯ ಆರೈಕೆ ಈ ಹೊತ್ತಿನ ಅವಶ್ಯಕತೆ ಎಂದರು. 

ಆಹಾರ ಮೇಳಗಳಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ಲಭ್ಯವಾಗುತ್ತದೆ. ಅನುಭವ ಹಾಗೂ ಜ್ಞಾನದ ಮೂಲಕ ಯಾವುದೇ ಕಠಿಣ ಸಂದರ್ಭಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ಅನುಭವವೇ ಬದುಕಿನ ಯಶಸ್ಸಿನ ಮೂಲ ಮಂತ್ರ. ಹಾಗಾಗಿ, ಎಲ್ಲಾ ಸಂದರ್ಭಗಳಲ್ಲೂ ತಾಳ್ಮೆಯಿಂದ ಅನುಭವ ಗಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ವಿದ್ಯಾರ್ಥಿಗಳಾಗಿದ್ದಾಗಲೇ ಆರೋಗ್ಯದ ಕಾಳಜಿ ವಹಿಸುವ ಅಗತ್ಯವಿದೆ. ಈ ಕುರಿತು ಅಟಿಲ್ ನೆರವಾಗುತ್ತದೆ. ಪ್ರಸ್ತುತ ಆಹಾರದಲ್ಲಿ ಸಾಕಷ್ಟು ಆಯ್ಕೆಗಳಿರುವುದರಿಂದ ಮೂಲ ಆಹಾರಗಳು ಕಣ್ಮರೆಯಾಗುತ್ತಿವೆ. ಆ ಕುರಿತು ಹೆಚ್ಚಿನ ಗಮನ ಕೊಡುವ ಅಗತ್ಯವಿದೆ ಎಂದರು. 

ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. 

ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ್, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಜಯವಂತ ನಾಯಕ್, ಡಾ. ಪರಿಣಿತ ಶೆಟ್ಟಿ, ಡಾ. ಶ್ರೀರಾಜ್, ಭರತ್ ಕುಮಾರ್ ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article