ಕೇಂದ್ರ ಸರಕಾರ ಜಾರಿ ಮಾಡಿದ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ

ಕೇಂದ್ರ ಸರಕಾರ ಜಾರಿ ಮಾಡಿದ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ


ಮಂಗಳೂರು: ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿ ಮಾಡಿದ ಕಾರ್ಮಿಕ ವಿರೋಧಿಯಾದ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಹಾಗೂ ಕರ್ನಾಟಕ ರಾಜ್ಯ ಸರಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿ ಇಂದು ದೇಶಾದ್ಯಂತ ಕಾರ್ಮಿಕರಿಂದ ಸ್ವಯಂಪ್ರೇರಿತ ಪ್ರತಿಭಟನೆ ನಡೆಸಬೇಕೆಂದು CITU ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.


ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುವ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ CITU ಕರ್ನಾಟಕ ರಾಜ್ಯ ನಾಯಕ ಡಾ. ಕೆ. ಪ್ರಕಾಶ್ ಅವರು, ದೇಶದ ಕಾರ್ಮಿಕ ವರ್ಗ ಸಮರಧೀರ ಹೋರಾಟಗಳ ಮೂಲಕ ರೂಪಿಸಿರುವ ನೂರಾರು ಕಾರ್ಮಿಕ ಕಾನೂನುಗಳಲ್ಲಿ 29 ಪ್ರಮುಖ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿದ ಕೇಂದ್ರ ಸರಕಾರ ಈ ದೇಶದ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆಯೇ ಹೊರತು ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನಲ್ಲ. ಈ ಸಂಹಿತೆಯು ಅತ್ಯಂತ ಅಪಾಯಕಾರಿ, ಅಪ್ರಜಾಸತ್ತಾತ್ಮಕ,ಕಾರ್ಮಿಕ ವಿರೋಧಿಯಾಗಿದ್ದು, ಎಲ್ಲಾ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೌಲ್ಯಗಳನ್ನು ನಾಶಗೊಳಿಸಿ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮಗಿರಿಯತ್ತ ಕೊಂಡೊಯ್ಯುವ ಮೂಲಕ ದೇಶವನ್ನೇ ಸರ್ವನಾಶಗೊಳಿಸುವ ಹುನ್ನಾರ ಅಡಗಿದೆ ಎಂದು ತೀವ್ರವಾಗಿ ಟೀಕಿಸಿದರು.


ಪ್ರಾಸ್ತಾವಿಕ ಮಾತುಗಳನ್ನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕಳೆದ ಅವಧಿಯಲ್ಲಿ ಇದೇ ನರೇಂದ್ರ ಮೋದಿ ಸರಕಾರ 2019ರಲ್ಲಿ ವೇತನ ಸಂಹಿತೆ ಹಾಗೂ 2020ರಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಜಾರಿಗೆ ತಂದಿದ್ದರೂ ನಂತರದ ಐದಾರು ವರ್ಷಗಳಲ್ಲಿ ಕಾರ್ಮಿಕ ವರ್ಗದ  ನಿರಂತರ ಪ್ರಬಲ ಹೋರಾಟಗಳು ನಡೆದ ಫಲವಾಗಿ ಕೇಂದ್ರ ಸರಕಾರ ಹಿಂದೆ ಸರಿದಿತ್ತು.ಮೂರನೆ ಬಾರಿಗೆ ಅಧಿಕಾರಕ್ಕೆ ಬಂದ ಈ ಸರಕಾರ ಕಾರ್ಪೊರೇಟ್ ಹಾಗೂ ದೊಡ್ಡ ಬಂಡವಾಳಿಗರ ಪರವಾಗಿ ನಿರಂತರವಾಗಿ ತುತ್ತೂರಿ ಬಾರಿಸಿತು. ಇತ್ತೀಚಿನ ಬಿಹಾರ ಚುನಾವಣಾ ಫಲಿತಾಂಶ ಹಾಗೂ ಅಧಿಕಾರದ ಮದದಿಂದ ಬೀಗುತ್ತಿರುವ ಕೇಂದ್ರ ಸರಕಾರ ಪ್ರಜಾಪ್ರಭುತ್ವ ರೀತಿಯಲ್ಲಿ ಚರ್ಚಿಸದೆ ಸಂಸತ್ತು ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ವಾಗಿ ವರ್ತಿಸಿರುವುದು ಸರ್ವಾಧಿಕಾರಿ ನಡೆಯಾಗಿದೆ ಎಂದು ಹೇಳಿದರು.

CITU ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ರವರು ಮಾತನಾಡಿ, 2014ರ ಬಳಿಕ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ಸರಕಾರ  ಈ ದೇಶದ ಸಂವಿಧಾನ ಕಾನೂನಿನ ಆಶಯಗಳನ್ನು ಗಾಳಿಗೆ ತೂರಿ ತನ್ನ ಫ್ಯಾಸಿಸ್ಟ್ ಬುದ್ಧಿಯನ್ನು ತೋರಿಸುತ್ತಾ ಬಂದಿದೆ. ದೇಶದ ಕಾರ್ಮಿಕ ವರ್ಗದ ಬದುಕಿನ ಮೇಲೆ ಬೆಳಕು ಚೆಲ್ಲಬೇಕಾದ ಭಾರತೀಯ ಕಾರ್ಮಿಕ ಸಮ್ಮೇಳನ(ILC)ವು ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಪದ್ದತಿ ಇದ್ದು,ಕಳೆದ 2015ರಿಂದ ಅದನ್ನು ಪ್ರಜ್ಞಾಪೂರ್ವಕವಾಗಿ ನಡೆಸದೆ ಕೇಂದ್ರ ಸರಕಾರ ಕಾರ್ಮಿಕ ವರ್ಗಕ್ಕೆ ಭಾರೀ ಅನ್ಯಾಯವೆಸಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಹಿತೆಗಳ ಅಧಿಸೂಚನೆಯ ಪ್ರತಿಗಳನ್ನು ಸುಡುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು._

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೋಟು, ಯಾದವ ಶೆಟ್ಟಿ, ರವಿಚಂದ್ರ ಕೊಂಚಾಡಿ, ರೋಹಿದಾಸ್, ನೋಣಯ್ಯ ಗೌಡ, ಕಟ್ಟಡ ಕಾರ್ಮಿಕರ ಸಂಘಟನೆಯ ಜನಾರ್ಧನ ಕುತ್ತಾರ್, ಚಂದ್ರಹಾಸ ಪಿಲಾರ್, ಇಬ್ರಾಹಿಂ ಅಂಬ್ಲಮೊಗರು, ಉಮೇಶ್ ಶಕ್ತಿನಗರ, ಬೀಡಿ ಕಾರ್ಮಿಕರ ಸಂಘಟನೆಯ ಜಯಂತಿ ಶೆಟ್ಟಿ, ವಿಲಾಸಿನಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಸಂತೋಷ್, ಖಾದರ್, ಬಂದರು ಶ್ರಮಿಕ ಸಂಘದ ಫಾರೂಕ್ ಉಳ್ಳಾಲ, ರಫೀಕ್ ಹರೇಕಳ, ರೈತ ಸಂಘಟನೆಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್,  DYFI ನಾಯಕರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ ಕೊಂಚಾಡಿ, ತಯ್ಯುಬ್ ಬೆಂಗರೆ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಮಾಧುರಿ ಬೋಳಾರ, ಯೋಗಿತಾ ಉಳ್ಳಾಲ, ಪ್ಲೇವಿ ಕ್ರಾಸ್ತಾ ಅತ್ತಾವರ, ಪ್ರಮೀಳಾ ದೇವಾಡಿಗ, ದಲಿತ ಸಂಘಟನೆಯ ರಘುವೀರ್, ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ ಕೆ,ಶೇಖರ್ ವಾಮಂಜೂರು, ವಿಕಾಸ್, ಕೃಷ್ಣ ಕತ್ತಲ್ ಸಾರ್, ಬ್ಯಾಂಕ್ ನೌಕರರ ಸಂಘಟನೆಯ ಪುರುಷೋತ್ತಮ ಪೂಜಾರಿ, ಮುನ್ನೂರು ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article