ಚಿಲ್ಲರೆ ಸಿಗರೇಟ್ ಮಾರುವ ಅಂಗಡಿಗಳನ್ನು ಬಂದ್ ಮಾಡಲು ಸೂಚನೆ
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ ಹಾಗೂ ಪಾನ್ ಮತ್ತಿತರ ತಂಬಾಕುಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಸಿಗರೇಟ್ಗಳನ್ನು ಇಡೀ ಪ್ಯಾಕ್ನಲ್ಲಿ ಮಾರಾಟ ಮಾಡಬೇಕೇ ಹೊರತು ಸಿಂಗಲ್ ಆಗಿ ಚಿಲ್ಲರೆ ಸಿಗರೇಟ್ಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ಗಳು ಆಗ್ಗಿಂದಾಗೆ ಅಂಗಡಿ, ಹೋಟೆಲ್ ತಪಾಸಣೆ ನಡೆಸಬೇಕು. ಯಾವುದೇ ಅನಧಿಕೃತ ಮಾರಾಟ ಕಂಡು ಬಂದಲ್ಲಿ ಅಂತಹ ಅಂಗಡಿಗಳನ್ನು ಮುಚ್ಚಿಸಿ ಜಪ್ತಿ ಮಾಡುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಬಗ್ಗೆ ಮುಂದಿನ ಸಭೆಯೊಳಗೆ ಎಷ್ಟು ಅಂಗಡಿಗಳಿಗೆ ಭೇಟಿ ನೀಡಲಾಗಿದೆ, ಎಷ್ಟು ಉಲ್ಲಂಘನೆ ಕಂಡು ಬಂದಿದೆ, ದಂಡ ವಿಧಿಸಿರುವ ಹಾಗೂ ಅಂಗಡಿಗಳನ್ನು ಸೀಝ್ ಮಾಡಿರುವ ಬಗ್ಗೆ ಎಲ್ಲಾ ಅಧಿಕಾರಿಗಳು ವರದಿ ನೀಡಬೇಕು ಎಂದು ಅವರು ಆದೇಶಿಸಿದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಅಧಿಕಗೊಂಡಿದ್ದು, ಧೂಮಪಾನ ತಂಬಾಕು ಸೇವನೆಯೇ ಕಾರಣವಾಗಿದೆ. ಜನರ ಜೀವನ ಮತ್ತು ಆರೋಗ್ಯ ತುಂಬಾ ಮುಖ್ಯವಾಗಿದೆ. ಆರೋಗ್ಯದ ವಿರುದ್ಧ ಚೆಲ್ಲಾಟವಾಡುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಅವರು ತಿಳಿಸಿದರು.
ಸಂಪೂರ್ಣ ನಿಷೇಧ..
ಶಾಲಾ-ಕಾಲೇಜುಗಳ 100 ಮೀಟರ್ ಅಂತರದಲ್ಲಿ ಇರುವ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಬೀಡಿ, ಸಿಗರೇಟು, ಪಾನ್ ಮಸಾಲ ಹಾಗೂ ಇತರ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಆಯಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಆಗಾಗ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಿಗರೇಟು ತಂಬಾಕು ಉತ್ಪನ್ನ ಮಾರಾಟ ಕಂಡು ಬಂದಲ್ಲಿ ಅಂತಹ ಅಂಗಡಿಗಳನ್ನು ತೆರವುಗೊಳಿಸಲು ಸ್ಥಳೀಯ ಸಂಸ್ಥೆಗೆ ವರದಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು. ಈ ಬಗ್ಗೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮುಂದಿನ ಒಂದು ವಾರದೊಳಗೆ ವರದಿ ನೀಡಬೇಕು. ಹಾಗೂ ಮುಂದಿನ ಸಭೆಯೊಳಗೆ ಎಷ್ಟು ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂಬುವುದರ ಬಗ್ಗೆ ವರದಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಚಾ ಕೆಫೆಗಳಲ್ಲಿ ಸಿಗರೇಟ್ ಸೇದುವ ವಿರುದ್ಧ ಕ್ರಮ..
ಇತ್ತೀಚಿನ ದಿನಗಳಲ್ಲಿ ನಗರದಲ್ಲಿರುವ ಕೆಲವು ಚಾ-ಕಾಫೀ ಕೆಫೆಗಳಲ್ಲಿ ಮತ್ತು ಹೋಟೆಲ್‌ಗಳಲ್ಲಿ ಸಿಗರೇಟ್ ಮಾರಾಟ ಹಾಗೂ ಬಹಿರಂಗವಾಗಿ ಧೂಮಪಾನ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ. ಈ ನಿಟ್ಟಿನಲ್ಲಿ ಅಂತಹ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಮುಚ್ಚಿಸಲು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮಕೈಗೊಳ್ಳಲು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ. ನವೀನ್ ಚಂದ್ರ, ಸಹಾಯಕ ಪೊಲೀಸ್ ಆಯುಕ್ತೆ ವಿಜಯ ಕ್ರಾಂತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಉಪಸ್ಥಿತರಿದ್ದರು.