ನಾಳೆಯಿಂದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಯಕ್ಷೋತ್ಸವ
ಮಂಗಳೂರು: ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಾಂಪ್ರಾದಾಯಿಕ ಯಕ್ಷ ಹಬ್ಬ ‘ಯಕ್ಷೋತ್ಸವ’ ನ.21 ಮತ್ತು 22ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ.
ಸತತ 33 ವರ್ಷಗಳಿಂದ ನಡೆಯುತ್ತಿರುವ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯು ಈ ಸಾಲಿನಲ್ಲಿ 34ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಒಟ್ಟು 12 ತಂಡಗಳು ತೆಂಕುತಿಟ್ಟು ಶೈಲಿಯಲ್ಲಿ 6 ವಿಭಿನ್ನ ಪ್ರಸಂಗಗಳನ್ನು ಆಡಿತೋರಿಸಿಲಿದ್ದಾರೆ.
ನ.21ರಂದು ಬೆಳಗ್ಗೆ 9.15ಕ್ಕೆ ಯಕ್ಷೋತ್ಸವ ಉದ್ಘಾಟನೆಗೊಳ್ಳಲಿದ್ದು, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ, ಕಾಲೇಜಿನ ಪೂರ್ವ ವಿದ್ಯಾರ್ಥಿ ಶಾಲೆಟ್ ಪಿಂಟೊ, ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾದ ಕೆ.ಎನ್. ಪ್ರವೀಣ್‌ಕುಮಾರ್ ಮತ್ತು ಪ್ರದೀಪ್ ನಾಯ್ಕ್ ಕೆ., ಕಾಲೇಜಿನ ನಿವೃತ್ತ ಪಾಚಾರ‍್ಯ ಪ್ರೊ. ಎ. ರಾಜೇಂದ್ರ ಶೆಟ್ಟಿ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ದೇವರಾಜ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್‌ಕುಮಾರ್ ಮುಖ್ಯ ಅತಿಥಿಗಳಾಗಿರುತ್ತಾರೆ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರೊ. ಉದಯಕುಮಾರ್ ಎಂ. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ನ.22ರಂದು ಸಂಜೆ 6ಕ್ಕೆ ಬಹುಮಾನ ವಿತರಣೆ ನಡೆಯಲಿದೆ ಎಂದು ಪ್ರಾಂಶುಪಾಲರ ಕಚೇರಿ ಪ್ರಕಟಣೆ ತಿಳಿಸಿದೆ.