"ವಾದಿರಾಜ ವಾಲಗ ಮಂಡಳಿ" ಕನ್ನಡ ಚಿತ್ರಕ್ಕೆ ನಾಳೆ ಮುಹೂರ್ತ

"ವಾದಿರಾಜ ವಾಲಗ ಮಂಡಳಿ" ಕನ್ನಡ ಚಿತ್ರಕ್ಕೆ ನಾಳೆ ಮುಹೂರ್ತ


ಮಂಗಳೂರು: ಡಾ. ಎಂ. ಎನ್. ರಾಜೇಂದ್ರ ಕುಮಾರ್ ನಿರ್ಮಾಣದ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರಕ್ಕೆ  ನ.21ರಂದು ನಗರದ ಉರ್ವ ಮಾರಿಗುಡಿ ದೇವಸ್ಥಾನದಲ್ಲಿ ಮಾರಿಯಮ್ಮನ ಸಾನಿಧ್ಯದಲ್ಲಿ  ಮುಹೂರ್ತ ನಡೆಯಲಿದೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಡಾ ಎಂಎನ್ ರಾಜೇಂದ್ರಕುಮಾರ್, ಎಂ.ಎನ್.ಆರ್ ಪ್ರೊಡಕ್ಷನ್  ಸಂಸ್ಥೆಯು 2009ರಲ್ಲಿ ಆರಂಭಗೊಂಡಿದ್ದು, "ಜೋಗುಳ" ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ "ಜೀಕನ್ನಡ" ವಾಹಿನಿಯಲ್ಲಿ ಪ್ರಸಾರಗೊಂಡ ಈ ಧಾರಾವಾಹಿಯು ಜನಮೆಚ್ಚುಗೆಯನ್ನು ಪಡೆದಿರುತ್ತದೆ. ಹಾಗೇನೇ, ಪ್ರತಿಭಾವಂತ ನಿರ್ದೇಶಕ ಎಂ.ಡಿ.ಶ್ರೀಧರ ಅವರ ನಿರ್ದೇಶನದಲ್ಲಿ "ಗಲಾಟೆ" ಎಂಬ ಸಿನೆಮಾ ನಟ ಪ್ರಜ್ವಲ್ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿದ್ದು. ಇದು ಬಹುಪಾಲು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಈ "ಗಲಾಟೆ" ಚಲನಚಿತ್ರ ’ಎಂ.ಎನ್.ಆರ್ ಪ್ರೊಡಕ್ಷನ್’ ಸಂಸ್ಥೆಯ ಮೊದಲ ಚಲನಚಿತ್ರವಾಗಿದೆ ಎಂದವರು ತಿಳಿಸಿದರು.

ತುಳುನಾಡಿನ ’ಎಂ.ಎನ್.ಆರ್ ಪ್ರೊಡಕ್ಷನ್’ ಸಂಸ್ಥೆ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ವಿಜಯಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ "ಡಾಕ್ಟಾ.ಭಟ್ರಾ?" ಎನ್ನುವ ತುಳು ಸಿನೆಮಾ ಮುಹೂರ್ತ ಮಾಡಲಾಗಿದ್ದು. ಈ ಸಿನೆಮಾ ಮುಂದಿನ ವರ್ಷ ತೆರೆಕಾಣಲಿದೆ.

ಈ ಮಧ್ಯೆ ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ನಿರ್ದೇಶಕ, ಕಾಂತಾರ ಸಿನೆಮಾದ "ವರಾಹ ರೂಪಂ" "ಕಾಂತಾರ-1" ರ "ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯು" ಹಾಡುಗಳನ್ನು ರಚಿಸಿರುವ ಶಶಿರಾಜ್ ರಾವ್ ಕಾವೂರು ರಚಿಸಿರುವ ಕಥೆ. ಚಿತ್ರಕಥೆ. ಸಂಭಾಷಣೆ, ನಿರ್ದೇಶನ ಇರುವ "ವಾದಿರಾಜ ವಾಲಗ ಮಂಡಳಿ" ಎಂಬ ಕನ್ನಡ ಸಿನೆಮಾವನ್ನು ತೆರೆಗೆ ಸಿದ್ಧಪಡಿಸುತ್ತಿದ್ದೇವೆ ಎಂದು ಡಾಎಂಎನ್ ರಾಜೇಂದ್ರ ಕುಮಾರ್ ತಿಳಿಸಿದರು.

ಈ ಸಿನೆಮಾ ಉತ್ತಮ ಕಥಾ ಹಂದರದಿಂದ ಸಂಪೂರ್ಣ ಹಾಸ್ಯ ಪ್ರಧಾನವಾಗಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೂಡಾ ನೀಡುತ್ತದೆ.

ಸಿನೆಮಾದಲ್ಲಿ ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ ತುಮಿನಾಡು. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಕ್ಯೂರ್. ಮೈಮ್ ರಾಮದಾಸ್, ಶೋಭರಾಜ್ ಪಾವೂರು, ತನ್ವಿ ರಾವ್. ವೇನ್ಯ ರೈ, ಚೈತ್ರಾ ಶೆಟ್ಟಿ, ಕೀರ್ತನಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ಹಲವು ಹಿಟ್ ಕನ್ನಡ, ತಮಿಳು ಸಿನೆಮಾಗಳ ಛಾಯಾಚಿತ್ರಗಾರ ಎಸ್. ಚಂದ್ರಶೇಖರನ್, ಕ್ಯಾಮೆರಾದ ಹಿಂದೆ ತಮ್ಮ ಕೈಚಳಕ ತೋರಿಸಲಿರುವರು. ಚಿತ್ರಕ್ಕೆ ಸಂಗೀತ ಮಣಿಕಾಂತ ಕದ್ರಿಯವರಿದ್ದು. ಸಹ ನಿರ್ಮಾಪಕರಾಗಿ ಜಯಪ್ರಕಾಶ ತುಂಬೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ನಟ ಸಂತೋಷ್ ಶೆಟ್ಟಿ ಸಹಕರಿಸಲಿದ್ದಾರೆ.

ಸಿನಿಮಾಕ್ಕೆ ಒಂದೇ ಹಂತದಲ್ಲಿ 40 ದಿನಗಳ ಕಾಲ  ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಶಶಿರಾಜ್ ಕಾವೂರು ತಿಳಿಸಿದರು.

ಇದೊಂದು ಹಾಸ್ಯ ಚಿತ್ರ. ಸಮಾಜಕ್ಕೊಂದು ಸಂದೇಶವೂ ಇದೆ. ಕರಾವಳಿಯ ಅನೇಕ ಮಂದಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದರು.

ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಲಕ್ಷ್ಮಣಕುಮಾರ್ ಮಲ್ಲೂರು, ಜಯಪ್ರಕಾಶ್ ತುಂಬೆ, ಎಸ್ ಚಂದ್ರಶೇಖರನ್, ಸುನಿಲ್ ಬಜಗೋಳಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article