ಬಡಪಾಯಿ ಬೀಡಿ ಕಾರ್ಮಿಕರಿಗೆ ಭಾರೀ ವಂಚನೆ ಮಾಡಿದ ಬೀಡಿ ಮಾಲಕರ ವಿರುದ್ದ ನಿರ್ಣಾಯಕ ಹೋರಾಟಕ್ಕಿಳಿದ ಬೀಡಿ ಕಾರ್ಮಿಕರು: ಸಮಾನ ಮನಸ್ಕ ಸಂಘಟನೆಗಳಿಂದ ಸಂಪೂರ್ಣ ಬೆಂಬಲ
ಕೇಂದ್ರ ಕಾರ್ಮಿಕ ಸಂಘಟನೆಯಾದ CITU ತನ್ನ ಅಡಿಯಲ್ಲಿರುವ ವಿವಿಧ ಕಾರ್ಮಿಕ ಸಂಘಟನೆಗಳ ಯೂನಿಯನ್ ಗಳ,ಮಧ್ಯಮ ವರ್ಗದ ನೌಕರರ ಸಂಘಟನೆಗಳ,ವಿದ್ಯಾರ್ಥಿ ಯುವಜನ,ಮಹಿಳಾ, ರೈತ, ದಲಿತ ಆದಿವಾಸಿ ಸೇರಿದಂತೆ ವಿವಿಧ ಸಾಮೂಹಿಕ ಜನಪರ ಸಂಘಟನೆಗಳ ಪ್ರಮುಖರ ಹಾಗೂ ಹಿತೈಷಿಗಳ ಜಂಟಿ ಸಭೆಯು ನಗರದ ವಿಕಾಸ ಕಚೇರಿಯಲ್ಲಿ ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ನಾಯಕರಾದ ಬಿ ಎಂ ಮಾಧವರವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಡಪಾಯಿ ಬೀಡಿ ಕಾರ್ಮಿಕರಿಗೆ ಕಳೆದ ಏಳು ವರ್ಷಗಳಿಂದ ಬಾಕಿ ಇರಿಸಿದ ತುಟಿಭತ್ತೆ ಹಾಗೂ ಕನಿಷ್ಠ ಕೂಲಿಯನ್ನು ರಾಜ್ಯ ಸರಕಾರದ ಸಮಕ್ಷಮದಲ್ಲಿ ಒಪ್ಪಿಗೆ ನೀಡಿ ಬಳಿಕ ಅದನ್ನು ತೀರಾ ನಿರ್ಲಕ್ಷಿಸಿ ಬೀಡಿ ಕಾರ್ಮಿಕರಿಗೆ ವಂಚನೆಗೈದ ಬೀಡಿ ಮಾಲಕರ ದುರಂಹಾಕಾರದ ವಿರುದ್ದ ಹಾಗೂ ನ್ಯಾಯಬದ್ದವಾಗಿ ನೀಡಬೇಕಾಗಿದ್ದ ಬೀಡಿ ಕಾರ್ಮಿಕರ ಪಾಲನ್ನು ತೆಗೆಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದ್ದ ರಾಜ್ಯ ಸರಕಾರದ ಬೇಜವಾಬ್ದಾರಿ ವರ್ತನೆಗೆ ತೀರಾ ಆಕ್ರೋಶ ವ್ಯಕ್ತಪಡಿಸಿದ ಎಲ್ಲಾ ಸಂಘಟನೆಗಳು ಬೀಡಿ ಕಾರ್ಮಿಕರ ನ್ಯಾಯಯುತ ಹೋರಾಟದಲ್ಲಿ ಸಕ್ರೀಯ ಪಾತ್ರ ವಹಿಸಲು ತೀರ್ಮಾನಿಸಿತು.
ಪ್ರತಿಯೊಂದು ಸಂಘಟನೆಗಳು ಒಂದೊಂದು ದಿನ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದು ಮಾತ್ರವಲ್ಲದೆ ನವೆಂಬರ್ 28ರಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಚಳುವಳಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧ ಜನಸಮುದಾಯದ ಜನತೆ ಭಾಗವಹಿಸುವಂತೆ ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ CITU ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್,ಬೀಡಿ ಫೆಡರೇಶನ್ ಅಧ್ಯಕ್ಷರಾದ ಸುಕುಮಾರ್,ಪ್ರಧಾನ ಕಾರ್ಯದರ್ಶಿ ಜೆ ಬಾಲಕೃಷ್ಣ ಶೆಟ್ಟಿ, ದಲಿತ ಚಳುವಳಿಯ ಹಿರಿಯ ನಾಯಕರಾದ ಎಂ.ದೇವದಾಸ್, ಸಾಮರಸ್ಯ ಮಂಗಳೂರು ಅದ್ಯಕ್ಷರಾದ ಮಂಜುಳಾ ನಾಯಕ್, ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಯಶವಂತ ಮರೋಳಿಯವರು ಉಪಸ್ಥಿತರಿದ್ದು,ಹೋರಾಟದ ಮಹತ್ವವನ್ನು ವಿವರಿಸಿದರು.CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮುನೀರ್ ಕಾಟಿಪಳ್ಳ, ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್,ಯೋಗೀಶ್ ಜಪ್ಪಿನಮೊಗರು, ಫಣೀಂದ್ರ ಕೆ, ರಮೇಶ್ ಉಳ್ಳಾಲ,ಬಿ ಎನ್ ದೇವಾಡಿಗ,ರೋನ್ ಸನ್ ಡಿಸೋಜ, ಸಂತೋಷ್ ಬಜಾಲ್,ರಿಜ್ವಾನ್ ಹರೇಕಳ,ಜನಾರ್ಧನ ಕುತ್ತಾರ್, ಚಂದ್ರಹಾಸ ಪಿಲಾರ್,ಅಶ್ರಪ್ ಹರೇಕಳ,ರಪೀಕ್ ಹರೇಕಳ, ರಿಜ್ವಾನ್ ಮುಡಿಪು,ಮನೋಜ್ ವಾಮಂಜೂರು,ಪ್ರಮೀಳಾ ದೇವಾಡಿಗ,ಯೋಗಿತಾ ಉಳ್ಳಾಲ, ಸಂತೋಷ್ ಆರ್ ಎಸ್,ಪ್ಲೇವಿ ಕ್ರಾಸ್ತಾ ಅತ್ತಾವರ,ಶಾಲಿನಿ,ನರೇಂದ್ರ ಹೊಯಿಗೆಬೈಲ್,ರಾಧಾಕೃಷ್ಣ ಬೊಂಡಂತಿಲ,ರಾಕೇಶ್ ಕುಂದರ್, ಸಮರ್ಥ ಭಟ್ ಮುಂತಾದವರು ಉಪಸ್ಥಿತರಿದ್ದರು.