ಸ್ವಾವಲಂಬಿಯಾಗಲು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಗೇರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು: ಶೋಭಾ ಕರಂದ್ಲಾಜೆ

ಸ್ವಾವಲಂಬಿಯಾಗಲು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಗೇರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು: ಶೋಭಾ ಕರಂದ್ಲಾಜೆ


ಮಂಗಳೂರು: ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೇರು ಬೀಜ ಉತ್ಪಾದನೆಯ ಕೊರತೆ ಇದ್ದು, ಇದರಿಂದಾಗಿ ವಿದೇಶದಿಂದ ಆಮದಿನ ಅನಿವಾರ್ಯತೆ ಎದುರಾಗಿದೆ. ಗೇರು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಗೇರು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಇದಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ  ನೀಡಲಿದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ದಿಮೆ ಮತ್ತು ಎಂಎಸ್‌ಎಂಇ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.


ಕರ್ನಾಟಕ ಗೋಡಂಬಿ ತಯಾರಕರ ಸಂಘದ ವತಿಯಿಂದ ಇಲ್ಲಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಶುಕ್ರವಾರ ಮೂರು ದಿನಗಳ ‘ಕಾಜು ಶತಮಾನೋತ್ಸವ  ಸಮ್ಮೇಳನ-2025’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ದೇಶದಲ್ಲಿ 4 ಲಕ್ಷ ಟನ್ ಗೇರು ಬೀಜದ ಬೇಡಿಕೆ ಇದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗೇರು ಬೀಜ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಆಫ್ರಿಕಾ, ವಿಯೆಟ್ನಾಂ  ದೇಶಗಳಿಂದ ಗೇರು ಆಮದು ಮಾಡಿಕೊಳ್ಳುವ ಪರಿಸ್ಥಿತಿ ತಲೆದೋರಿದೆ. ವಿಯೆಟ್ನಾಂನಲ್ಲಿ ಹೆಕ್ಟೇರ್‌ಗೆ 1ರಿಂದ 2 ಸಾವಿರ ಕೇಜಿ ಗೇರು ಉತ್ಪಾದನೆಯಾದರೆ, ಭಾರತದಲ್ಲಿ  ಅದರ ಪ್ರಮಾಣ ಹೆಕ್ಟೇರ್‌ಗೆ 674 ಕೇಜಿ ಮಾತ್ರ. ಇದಕ್ಕೆ ಹವಾಮಾನ ಆಧಾರಿತ ಬೆಳೆ ಹಾಗೂ ಗೇರು ಬೀಜಗಳ ಗುಣಮಟ್ಟ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಉತ್ಕೃಷ್ಟ  ಗುಣಮಟ್ಟದ ಬೀಜ ಪೂರೈಕೆಯಾಗಬೇಕು. ಗೇರು ಬೀಜಗಳ ಸಂಸ್ಕರಣೆಗೆ ಆಧುನಿಕ ಯಂತ್ರಗಳ ಬಳಕೆಯಾಗಬೇಕು. ಈ ಬಗ್ಗೆ ಗೇರು ಉತ್ಪಾದಕರು, ಕಂಪನಿಗಳಿಗೆ  ಬ್ಯಾಂಕ್‌ಗಳ ಆರ್ಥಿಕ ನೆರವಿಗೆ ಮುಂದಾಗಬೇಕು. ಈ ಬಗ್ಗೆ ಗೇರು ಉತ್ಪಾದಕರು, ಕಂಪನಿಗಳು, ಎಂಎಸ್‌ಎಂಇಗಳ ಜೊತೆ ಕೇಂದ್ರ ಸರ್ಕಾರ ಸಭೆ ನಡೆಸಲಿದೆ. ಇಂತರ ಪ್ರಯತ್ನಗಳು ನಡೆದರೆ ಮಾತ್ರ ಗುಣಮಟ್ಟದ ಗೇರು ಬೀಜ ಉತ್ಪಾದನೆಯೊಂದಿಗೆ ವಿದೇಶಿ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ಅವರು ಹೇಳಿದರು.

ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನದಲ್ಲಿ, ಹಿಂದಿನ ಕಾಲದಲ್ಲಿ ಬೀಡಿ ಉದ್ಯಮದಂತೆ ಈಗ ಬದುಕಿಗೆ ಗೋಡಂಬಿ ಉದ್ಯಮ ಆಧಾರವಾಗಿದೆ. ಸಭೆ, ಸಮಾರಂಭಗಳಲ್ಲಿ ವೀಳ್ಯದೆಲೆ ಬದಲಿಗೆ ಈಗ ಗೋಡಂಬಿಯನ್ನು ಇರಿಸುವ ಮೂಲಕ ಅದಕ್ಕೂ ಗೌರವ ಪ್ರಾಪ್ತವಾಗುತ್ತಿದೆ. ಗೋಡಂಬಿ ಕೃಷಿಯ ನ್ನು ಉತ್ತೇಜಿಸುವ ಮೂಲಕ ಸ್ವಾವಲಂಬಿ ಬದುಕಿಗೆ ಮುಂದಾಗಬೇಕು ಎಂದರು.

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗೇರು ಉದ್ದಿಮೆ ಈಗ ವಿಶ್ವವ್ಯಾಪಿಯಾಗಿಯಾಗಿದೆ. ಈ ಮೂಲಕ ಕರಾವಳಿಯ ಅಸ್ಮಿತೆಯನ್ನು ಎಲ್ಲೆಡೆಗೆ  ಪಸರಿಸಿದೆ ಎಂದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಭಾಗೀರಥಿ ಮುರುಳ್ಯ, ಸ್ಪೈನ್ ಇಂಟರ್ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಅಶೋಕ್ ಕೃಷ್ಣನ್, ನೆದರ್‌ಲ್ಯಾಂಡ್‌ನ ಇಂಟರ್‌ನ್ಯಾಷನಲ್ ಖರೀದಿದಾರ ರೇನೋ ಗಾರ್ಡಿಯನ್, ಇಟಿಜಿ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಬಾರ್ಕೂರ್ ಮತ್ತಿತರರಿದ್ದರು.

ಕರ್ನಾಟಕ ಗೋಡಂಬಿ ತಯಾರಕರ ಸಂಘದ ಅಧ್ಯಕ್ಷ ಎ.ಕೆ.ರಾವ್ ಸ್ವಾಗತಿಸಿದರು. ಕಾಜು ಶತಮಾನೋತ್ಸವ ಸಮ್ಮೇಳನ ಸಮಿತಿ ಸಂಚಾಲಕ ಕಲ್ಬಾವಿ ಪ್ರಕಾಶ್ ರಾವ್  ಪ್ರಾಸ್ತಾವಿಕ ಮಾತನಾಡಿದರು.

ಸಮ್ಮೇಳನದ ಅಂಗವಾಗಿ ಗೋಡಂಬಿಯ ವಿವಿಧ ಉತ್ಪನ್ನಗಳ ಪ್ರದರ್ಶನ, ಮಾರಾಟ ಹಮ್ಮಿಕೊಳ್ಳಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article