ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಜಿ.ಎಂ. ಭೇಟಿ
ಮುಕುಲ್ ಶರಣ್ ಮಾಥುರ್ ಅವರು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ ಪ್ರಯಾಣಿಕ ಸೌಲಭ್ಯಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಸೇವಾ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಅಂಶಗಳನ್ನು ಅವಲೋಕಿಸಿದರು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಹಾಗೂ ಇತರ ಹಿರಿಯ ಅಽಕಾರಿಗಳು ಉಪಸ್ಥಿತರಿದ್ದರು.
ಬಳಿಕ ಪ್ರಧಾನ ವ್ಯವಸ್ಥಾಪಕರು ಸಕಲೇಶಪುರ ಘಾಟ್ ಸೆಕ್ಷನ್‌ನ ವಿದ್ಯುತ್ತಿಕರಣ ಕಾರ್ಯಗಳನ್ನೂ ಪರಿಶೀಲಿಸಿದರು. ಹೊಸದಾಗಿ ವಿದ್ಯುದೀಕೃತಗೊಳ್ಳುತ್ತಿರುವ ಭಾಗದ ಸಿದ್ಧತೆ ಹಾಗೂ ಭದ್ರತಾ ಮಾನದಂಡಗಳನ್ನು ಪರಿಶೀಲಿಸಿದರು. ಜೊತೆಗೆ ಸುಬ್ರಹ್ಮಣ್ಯ ರಸ್ತೆ ಮತ್ತು ಹಾಸನ ನಡುವಿನ ವಿಭಾಗದಲ್ಲಿ ವಿಂಡೋ ಟ್ರೈಯಾಂಗಲ್ ಪರಿಶೀಲನೆ ನಡೆಸಲಾಗಿದ್ದು, ರೈಲ್ವೆ ಹಳಿಗಳ ಸ್ಥಿತಿ, ಸಿಗ್ನಲ್ ವ್ಯವಸ್ಥೆಗಳು ಹಾಗೂ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರಕ್ಕೆ ಅಗತ್ಯವಿರುವ ಇತರೆ ಕಾರ್ಯಾಚರಣಾ ಅಂಶಗಳ ಮೌಲ್ಯಮಾಪನ ಮಾಡಿದರು.
ಮುಕುಲ್ ಸರನ್ ಮಾಥುರ್, ಮುದಿತ್ ಮಿತ್ತಲ್ ಅವರು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಹನ ನಡೆಸಿ, ರೈಲ್ವೆ ಸೌಲಭ್ಯಗಳು, ಸೇವೆಗಳು ಮತ್ತು ಪ್ರಯಾಣ ಅನುಭವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಹಿರಿಯ ಅಽಕಾರಿಗಳು ಕೂಡ ಭಾಗವಹಿಸಿ ಪ್ರಯಾಣಿಕರಿಂದ ದೊರೆತ ಸಲಹೆಗಳನ್ನು ದಾಖಲಿಸಿಕೊಂಡು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಜಿಎಂ ಅವರನ್ನು ಭೇಟಿ ಮಾಡಿದ ರೈಲ್ವೇ ಬಳಕೆದಾರರು ತಮ್ಮ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು. ಸುಬ್ರಹ್ಮಣ್ಯ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿದ್ದು, ಕಾಮಗಾರಿಗೆ ವೇಗ ನೀಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು, ಸುಬ್ರಹ್ಮಣ್ಯ ನಿಲ್ದಾಣವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕು, ಪರಂಗಿಪೇಟೆಯಲ್ಲಿ ಸ್ಥಗಿತ ಮಾಡಲಾದ ನಿಲ್ದಾಣವನ್ನು ೬ ಲೈನ್‌ಗಳನ್ನೊಳಗೊಂಡ ಪ್ರಮುಖ ನಿಲ್ದಾಣವನ್ನಾಗಿ ಮಾಡಬೇಕು, ನೇರಳಕಟ್ಟೆ ನಿಲ್ದಾಣದಲ್ಲಿ ರೈಲ್ವೇ ನಿಲ್ದಾಣ ಮೇಲ್ದಾಟು ಸೇತುವೆ ನಿರ್ಮಿಸಬೇಕು, ಕಬಕಪುತ್ತೂರು ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ಫಾರ್ಮ್ ಕಾಮಗಾರಿ ಮುಕ್ತಾಯಗೊಳಿಸಿ ಲಿಫ್ಟ್, ಎರಡನೇ ಮೇಲ್ದಾಟು ಸೇತುವೆ ನಿರ್ಮಿಸಬೇಕು, ಸಕಲೇಶಪುರ ಡಬ್ಲಿಂಗ್‌ಗೆ ಬಿಡುಗಡೆಯಾದ ಹಣವನ್ನು ಮಂಗಳೂರಿನ ಪಡೀಲಿನಿಂದ ಸುಬ್ರಹ್ಮಣ್ಯದ ವರೆಗೆ ಡಬ್ಲಿಂಗ್ ಕೆಲಸಕ್ಕೆ ವರ್ಗಾಯಿಸಿ ವಿದ್ಯುತ್ ಲೈನ್ ಅಳವಡಿಕೆಯೊಂದಿಗೆ ಯೋಜನೆ ರೂಪಿಸಬೇಕು, ಕಣ್ಣೂರು-ಬೆಂಗಳೂರು ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಬೇಕು ಮೊದಲಾದ ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅವರ ಜೊತೆ ಚರ್ಚಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಪುತ್ತೂರು ಸಂಚಾಲಕ ಸುದರ್ಶನ್ ಪುತ್ತೂರು, ನೆಟ್ಟಣ ರೈಲು ಬಳಕೆದಾರರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಜಿ., ಮತ್ತಿತರರು ಉಪಸ್ಥಿತರಿದ್ದರು.