ಜನರಿಗೆ ಆರೋಗ್ಯದ ಖಾತರಿ ನೀಡಿ: ಬಿ.ಕೆ. ಇಮ್ತಿಯಾಜ್
Friday, November 28, 2025
ಮಂಗಳೂರು: ಚಿಕಿತ್ಸೆ ಇಲ್ಲದೆ ಯಾವುದೇ ನಾಗರಿಕರೂ ಸಾಯುವ ಸ್ಥಿತಿ ಬರಬಾರದು ಎಲ್ಲಾ ನಾಗರಿಕರಿಗೆ ಆರೋಗ್ಯದ ಖಾತರಿ ನೀಡಿ ಸಂವಿಧಾನದ ಆಶಯವನ್ನು ಈಡೇರಿಸಬೇಕೆಂದು ಬಿ.ಕೆ. ಇಮ್ತಿಯಾಜ್ ಹೇಳಿದರು.
ಅವರು ಇಂದು ಉಳ್ಳಾಲ ತಾಲೂಕು ಅಂಬಲಮೊಗರು ಗ್ರಾಮದ ಮದಕ ಎಂಬಲ್ಲಿ ಡಿವೈಎಫ್ಐ ತಿಲಕ್ ನಗರ ಘಟಕದ ನೇತೃತ್ವದಲ್ಲಿ ಉಳ್ಳಾಲದಲ್ಲಿ ತಾಲೂಕು ಆಸ್ಪತ್ರೆ ಮಂಜೂರು ಮಾಡಲು ಒತ್ತಾಯಿಸಿ, ವೆನ್ಲಾಕ್ ಜಿಲ್ಲಾಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆ ಆಗಿ ಮೇಲ್ದರ್ಜೆಗೆ ಏರಿಸಿ ಜಯದೇವ ಹೃದ್ರೋಗ ಮತ್ತು ಮತ್ತು ಕಿದ್ವಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಲು ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ, ಆರಂಭಿಸಬೇಕಿದ್ದ ಸರಕಾರ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆ ಧಣಿಗಳ ಹಿತ ಕಾಯುತ್ತಾ ಬಡವರ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಬಡವರು ಕಾಯಿಲೆ ಬಂದಾಗ ಚಿಕಿತ್ಸೆಗೆ ಹಣ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಭಿಮಾನ ಬಿಟ್ಟುಕಣ್ಣೀರು ಹಾಕಿ ಭಿಕ್ಷೆ ಬೇಡುವ ಅಸಹನೀಯ ಪರಿಸ್ಥಿತಿಯಿಂದ ರಕ್ಷಣೆ ಮಾಡಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಲು ಡಿವೈಎಫ್ಐ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಡಿವೈಎಫ್ಐ ತಾಲೂಕು ಅಧ್ಯಕ್ಷರಾದ ಯುವ ನ್ಯಾಯವಾದಿ ನಿತಿನ್ ಕುತ್ತಾರ್, ಕಾರ್ಯದರ್ಶಿ ರಿಝ್ವಾನ್ ಹರೇಕಳ, ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡರಾದ ಅಶ್ರಫ್ ಹರೇಕಳ,ರಝಾಕ್ ಮುಡಿಪು,ರಿಯಾಝ್ ಎಲಿಯಾರ್,ಇಬ್ರಾಹಿಂ ಮದಕ,ಅಬೂಬಕರ್ ಜಲ್ಲಿ,ಸುಂದರ್,ಇಮ್ರಾನ್ ,ಇರ್ಫಾನ್,ಉಸ್ಮಾನ್, ಶಮೀರ್ ಉಪಸ್ಥಿತರಿದ್ದರು.ಡಿವೈಎಫ್ಐ ಉಳ್ಳಾಲ ತಾಲೂಕು ಮುಖಂಡ ಅನಿಲ್ ತಿಲಕ್ ನಗರ ಸ್ವಾಗತಿಸಿ ವಂದಿಸಿದರು.

