ಪಡುಮಾರ್ನಾಡಿನಲ್ಲಿ ಸೌರಶಕ್ತಿ ಚಾಲಿತ ಬಿ.ಎಸ್.ಎನ್.ಎಲ್ ಟವರ್ ನೆಟ್ವಕ್೯ ಸೇವೆ ಆರಂಭ
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್ ವಕ್೯ ಕೊರತೆಯಿಂದಾಗಿ ಜನರಿಗೆ ಸಮಸ್ಯೆಯುಂಟಾಗುತ್ತಿತ್ತು. ಇದರಿಂದ ಬೇಸತ್ತ ಹಲವು ಮಂದಿ ಬಿಎಸ್‌ಎನ್‌ಎಲ್ ಸೇವೆ ತೊರೆದು ಖಾಸಗಿ ನೆಟ್‌ವರ್ಕ್ ಕಡೆಯತ್ತ ಹೋಗಿದ್ದರು.
ಗ್ರಾಮದ ಕೆಲವೆಡೆ ಟವರ್‌ಗಳ ಸ್ಥಾಪನೆಯ ಕುರಿತು ಹರಡಿದ್ದ ಅಪಪ್ರಚಾರಗಳಿಂದಾಗಿ ಹಲವೆಡೆ ಜಾಗ ಗುರುತು ಮಾಡುವಿಕೆ ಮತ್ತು ನಿರ್ಮಾಣ ಕಾರ್ಯಕ್ಕೆ ಆರಂಭದಲ್ಲಿ ತೀವ್ರ ವಿರೋಧ ಹಾಗೂ ತೊಡಕುಗಳು ಎದುರಾಗಿದ್ದವು.
ಈ ಸಂದರ್ಭದಲ್ಲಿ, ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ಅವರು ತಮ್ಮ ಮನೆಯ ಸಮೀಪದಲ್ಲಿಯೇ ಸರ್ಕಾರಿ ಜಾಗವನ್ನು ಗುರುತಿಸಲು ಮತ್ತು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅವರು ಶ್ರಮಿಸಿದರು. ಅಂತಿಮವಾಗಿ, ಅಮನೊಟ್ಟು ಶಾಲೆಯ ಸಮೀಪದಲ್ಲಿರುವ ಐದು ಸೆಂಟ್ಸ್ ಸರ್ಕಾರಿ ಜಾಗದಲ್ಲಿ ಬಿಎಸ್‌ಎನ್‌ಎಲ್‌ನ ಈ ಮಹತ್ವದ ಯೋಜನೆ ಸಾಕಾರಗೊಂಡಿತ್ತು.
ನಂತರ ಸಂಪೂರ್ಣವಾಗಿ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ 4ಜಿ ಟವರ್ ಅಳವಡಿಸಲಾಗಿತ್ತು. ಇದೀಗ ಶುಕ್ರವಾರದಿಂದ ಟವರ್ ನೆಟ್ ವಕ್೯ ಸೇವೆ ಆರಂಭಿಸುವ ಮೂಲಕ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಸಂಪೂರ್ಣ ಸೌರಶಕ್ತಿ ಚಾಲಿತ:
ಅಳವಡಿಸಲಾಗಿರುವ ಹೊಸ ಟವರ್ 135 ಅಡಿಗಳಷ್ಟು ಎತ್ತರವನ್ನು ಹೊಂದಿದೆ. ಬಿಎಸ್‌ಎನ್‌ಎಲ್ ತಯಾರಿಸಿದ ಅತ್ಯಾಧುನಿಕ ಸೌರ ಪ್ಯಾನೆಲ್‌ಗಳನ್ನು ಬಳಸಿ ಈ ಟವರ್ ಕಾರ್ಯನಿರ್ವಹಿಸಲಿದೆ. ಇದು ಪರಿಸರಸ್ನೇಹಿಯಾಗಿದ್ದು, ಇಂಧನ ವೆಚ್ಚವನ್ನು ಉಳಿತಾಯ ಮಾಡುತ್ತದೆ. ಈ ಟವರ್ ಕನಿಷ್ಠ ಮೂರು ದಿನಗಳ ಬ್ಯಾಕಪ್ ಸಾಮರ್ಥ್ಯವನ್ನು ಹೊಂದಿದೆ. ಮಳೆಗಾಲ ಅಥವಾ ಸೂರ್ಯನ ಬೆಳಕು ಇಲ್ಲದ ದಿನಗಳಲ್ಲಿಯೂ ನಿರಂತರ ಸೇವೆಗೆ ಇದು ಸಹಕಾರಿಯಾಗಿದೆ. ಈ ಹೊಸ ಟವರ್‌ನ ನೇರ ವ್ಯಾಪ್ತಿಯ ಎರಡು ಕಿಲೋಮೀಟರ್‌ಗಳಷ್ಟು ದೂರದವರೆಗೆ ನೆಟ್‌ವರ್ಕ್ ಸಮಸ್ಯೆ ದೂರವಾಗಿದ್ದು, ಗ್ರಾಮದ ನೂರಾರು ಕುಟುಂಬಗಳಿಗೆ 4ಜಿ ಸೇವೆ ಲಭ್ಯವಾಗಲಿದೆ.
ಈ ಹೊಸ ಸೌರಶಕ್ತಿ ಚಾಲಿತ ಟವರ್‌ನ ಸೇವೆ ಆರಂಭಿಸಿದ್ದರಿಂದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ.
ಸಧ್ಯ 4ಜಿ ನೆಟ್‌ವರ್ಕ್ ನಲ್ಲಿ ಸಿಗಲಿದ್ದು, ಮುಂದಿ ದಿನಗಳಲ್ಲಿ 5ಜಿ ಸೇವೆಯೂ ಲಭ್ಯವಾಗಲಿದೆ. ಪರಿಸರಸ್ನೇಹಿಯ ಜೊತೆಗೆ ಸಟಲೈಟ್ ಮಾದರಿಯಲ್ಲಿ ಕಾರ್ಯಾಚರಿಸುವುದರಿಂದ ಭೂಮಿಯನ್ನು ಅಗೆದು ಕೇಬಲ್ ಅಳವಡಿಸುವ ಜಂಜಾಟವೂ ಇಲ್ಲ. -ರಮೇಶ್ ಶೆಟ್ಟಿ, ಪಡುಮಾರ್ನಾಡು ಗ್ರಾಪಂ ಸದಸ್ಯ
