ಪುರುಷೋತ್ತಮ ಯೋಗ ಪಠಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಭಗವದ್ಗೀತೆಯ 15ನೇ ಅಧ್ಯಾಯ ಪುರುಷೋತ್ತಮ ಯೋಗದ 20 ಶ್ಲೋಕಗಳನ್ನು ಪಠಿಸುವ ಮೂಲಕ ಸಾಮೂಹಿಕ ಗೀತಾ ಪಾರಾಯಣದಲ್ಲಿ ಭಾಗಿಯಾದರು.
ಬೆಳಗ್ಗೆ 9.30ರಿಂದ ಮಹಿಳೆಯರು ಮತ್ತು ಪುರುಷರು ಸೇರಿದಂತೆ ಆಬಾಲವೃದ್ಧರಾದಿಯಾಗಿ ಸೇರಿದ ಸಹಸ್ರಾರು ಮಂದಿ ಭಗವದ್ಗೀತೆಯ 1ರಿಂದ 18 ಅಧ್ಯಾಯಗಳನ್ನು ಲಯಬದ್ಧವಾಗಿ ಪಾರಾಯಣ ಮಾಡಿದರು. ಮೋದಿ ಕೃಷ್ಣಮಠಕ್ಕೆ ಆಗಮನದ ವೇಳೆಗೆ 18ನೇ ಅಧ್ಯಾಯದ ಸಾಮೂಹಿಕ ಪಾರಾಯಣ ಸಮಾಪ್ತಿಯಾಗಿರುವುದು ವಿಶೇಷವಾಗಿತ್ತು. ಬಳಿಕ ಮೋದಿ ಕೂಡಾ ಪಾರಾಯಣದಲ್ಲಿ ಭಾಗವಹಿಸಿ ಲಕ್ಷ ಕಂಠ ಗೀತಾ ಪಾರಾಯಣವನ್ನು ಕೃಷ್ಣಾರ್ಪಣಗೊಳಿಸಿದರು.
ಈ ಮಹೋನ್ನತ ಕಾರ‍್ಯಕ್ರಮಕ್ಕೆ ಶ್ರೀಮಠ ಹಾಗೂ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬೆಳಗ್ಗೆ 7ರಿಂದ ಅಪರಾಹ್ನ 3 ಗಂಟೆ ವರೆಗೆ ನಗರದೊಳಗೆ ವಾಹನ ಪ್ರವೇಶ ನಿರ್ಬಂಧಿಸಲಾಗಿತ್ತು. ಪಾರಾಯಣದಲ್ಲಿ ಭಾಗವಹಿಸುವವರಿಗೆ ಊಟೋಪಹಾರದ ವ್ಯವಸ್ಥೆ ಮಾಡಲಾಗಿತ್ತು. ಶ್ರದ್ಧಾಭಕ್ತಿಯಿಂದ ನಡೆದ ಈ ಕಾರ‍್ಯಕ್ರಮದಲ್ಲಿ ಪರ‍್ಯಾಯ ಉಭಯ ಶ್ರೀಪಾದರು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲೆಯ ಶಾಸಕರು, ಸಂಸದರು ಭಾಗಿಯಾಗಿದ್ದರು.