ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆಗೆ ಮುಖ್ಯಮಂತ್ರಿಗೆ ಮನವಿ

ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆಗೆ ಮುಖ್ಯಮಂತ್ರಿಗೆ ಮನವಿ


ಮಂಗಳೂರು: ತೀಯಾ ಸಮುದಾಯದ ಅಭಿವೃದ್ಧಿಗಾಗಿ ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಬೇಕು ಎಂಬುದು ಸೇರಿದಂತೆ ತೀಯಾ ಸಮುದಾಯದ ವಿವಿಧ ಬೇಡಿಕೆಗಳ ಮನವಿಯನ್ನು ಡಿ.3ರಂದು ಮಂಗಳೂರು ವಿವಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ ತಿಳಿಸಿದರು. 

ವರ್ಕಳದ ಶಿವಗಿರಿ ಮಠದ ನೇತೃತ್ವದಲ್ಲಿ ಹಾಗೂ ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಮಹಾತ್ಮಾ ಗಾಂಧಿಜಿ ಮತ್ತು ಶ್ರೀ ನಾರಾಯಣ ಗುರುಗಳ ವರ್ಕಳ ಸಂವಾದದ ಶತಮಾನೋತ್ಸವ ಹಾಗೂ ಶ್ರೀ ನಾರಾಯಣ ಗುರುಗಳ ಮಹಾನಿರ್ವಾಣ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ಡಿ.3 ರಂದು ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಈ ಮಹೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. 

ಈ ವೇಳೆ ತೀಯಾ ಸಮುದಾಯದ ಬೇಡಿಕೆಯ ಮನವಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗುವುದು ಎಂದು ಕುದ್ರೋಳಿ ಶ್ರೀ ಭಗವತೀಕ್ಷೇತ್ರ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರ, ಬೋಲ್ನಾಡ್ ಶ್ರೀ ಭಗವತೀ ಕ್ಷೇತ್ರಕ್ಕೆ ಒಳಪಟ್ಟ ತೀಯಾ ಸಮಾಜದ ಪ್ರಮುಖರ ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು ತಿಳಿಸಿದರು. 

ಕಾರ್ಯಕ್ರಮದ ಅಂಗವಾಗಿ ‘ಯತಿಪೂಜೆ’ ಮತ್ತು ಸರ್ವಮತ ಸಮ್ಮೇಳನ ಆಯೋಜನೆಗೊಂಡಿದೆ. ವಿವಿಧ ಮಠಗಳಿಂದ ಆಗಮಿಸುವ ಐವತ್ತು ಮಂದಿ ಸನ್ಯಾಸಿಗಳಿಗೆ ಗೌರವ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ತೀಯಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು. 

ಬ್ರಹ್ಮಶ್ರೀ ನಾರಾಯಣ ಗುರುಗಳು ತೀಯಾ ಸಮಾಜದಲ್ಲಿ ಜನಿಸಿದ್ದಾರೆ. ಗುರುಗಳು ನಮ್ಮ ರಾಜ್ಯಕ್ಕೆ ಪ್ರಥಮ ಬಾರಿ 1908ರಲ್ಲಿ ಭೇಟಿ ನೀಡಿದ ಸ್ಥಳವಾದ ಶ್ರೀ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ಬಹಳಷ್ಟು ಇತಿಹಾಸವಿದೆ. ನಾರಾಯಣ ಗುರುಗಳಿಗೂ ನಮ್ಮ ಸಮಾಜಕ್ಕೂ ಅವಿನಾಭಾವ ಸಂಬಂಧವಿದ್ದ ಕಾರಣ ಗುರುಗಳು ಅವರ ಕಾಲ ಘಟ್ಟದಲ್ಲಿ ಮಾಡಿರುವ ಕೆಲವೊಂದು ಕಾರ್ಯಕ್ರಮಗಳನ್ನು ಮತ್ತೆ ನೆನೆಪಿಸಿಕೊಂಡು ಕಾರ್ಯಕ್ರಮ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಮುಖರ ಅಪೇಕ್ಷೆ ಎಂದರು. 

ತೀಯಾ ಸಮಾಜ ಬಾಂಧವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,25,000ಕ್ಕೂ ಹೆಚ್ಚಿದ್ದು, ರಾಜ್ಯದಲ್ಲಿ 3,50,000ಕ್ಕಿಂತ ಅಧಿಕ ಜನಸಂಖ್ಯೆಯನ್ನು ಸಮಾಜ ಹೊಂದಿದೆ. ಇದುವರೆಗೆ ಯಾವುದೇ ಸರಕಾರದಿಂದ ನಮ್ಮ ಸಮಾಜಕ್ಕೆ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ಪ್ರಯೋಜನ ಲಭಿಸಿದ್ದು ಹೊರತುಪಡಿಸಿ ಸರಕಾರ ಪ್ರತ್ಯೇಕವಾಗಿ ಯಾವುದೇ ರೀತಿಯಲ್ಲಿ ನಮ್ಮ ಸಮಾಜವನ್ನು ಗುರುತಿಸಿಲ್ಲ. ಸಿದ್ದರಾಮಯ್ಯ ಅವರ ಸರಕಾರದ ಚಿಂತನೆಯಂತೆ ಸಣ್ಣ ಸಣ್ಣ ಸಮುದಾಯಕ್ಕೆ ನಿಗಮಗಳನ್ನು ರಚನೆ ಮಾಡಿ ಸಮುದಾಯ ಅಭಿವೃದ್ಧಿ ಮಾಡುವ ಯೋಜನೆಯಲ್ಲಿ ತೀಯಾ ಸಮುದಾಯಕ್ಕೆ ನಿಗಮ ರಚನೆ ಮಾಡಬೇಕೆಂಬ ಪ್ರಮುಖ ಮನವಿ ನೀಡಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ತೀಯಾ ಸಮಾಜ ಭವನ ನಿರ್ಮಾಣಕ್ಕೆ ಸ್ಥಳ ಒದಗಿಸಬೇಕು, ದೇವಸ್ಥಾನಗಳ ದರ್ಶನದವರಿಗೆ, ಆಚಾರಪಟ್ಟವರಿಗೆ ಕೇರಳ ಮಾದರಿಯಲ್ಲಿ ಮಾಶಾಸನ ನೀಡಬೇಕು, ತೀಯಾ ಸಮಾಜಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಮನವಿಯನ್ನೂ ಸಿಎಂ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಉಳ್ಳಾಲ ಭಗವತಿ ಕ್ಷೇತ್ರದ ಸುರೇಶ್ ಭಟ್ನಗರ, ಕುದ್ರೋಳಿ ಭಗವತಿ ಕ್ಷೇತ್ರದ ವಿಶ್ವನಾಥ ಮಂಕಿಸ್ಟ್ಯಾಂಡ್, ಪ್ರಮುಖರಾದ ದೇವದಾಸ್ ಕೊಲ್ಯ, ಪ್ರೇಮಚಂದ್ರ, ಶಶಿಕಲಾ, ಆಶಾ ಚಂದ್ರಮೋಹನ್, ಸುಷ್ಮಾ ದೀಪಕ್, ಪುರುಷ ಸಾಲಿಯಾನ್, ಸುಧೀರ್ ಜೆಪ್ಪು, ಉಮೇಶ್ ಬಿಕರ್ನಕಟ್ಟೆ, ಪ್ರಭಾಕರ ಯೆಯ್ಯಾಡಿ, ರವಿ ಕೊಡಿಯಾಲಬೈಲ್, ರಾಘವ ಆರ್.ಉಚ್ಚಿಲ್, ರಾಜ್ಗೋಪಾಲ್, ಉಮೇಶ್ ಬೆಂಜನಪದವು, ದಿನೇಶ್ ಕುಂಪಲ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article