ಜಮೀನು ಸ್ವಾಧೀನ ಪಡಿಸದಿರುವುದನ್ನು ಖಂಡಿಸಿ ಪ್ರತಿಭಟನೆ
ಸಂತ್ರಸ್ತರು ಕಳೆದ ಮೇ ತಿಂಗಳಲ್ಲಿ ಹನ್ನೊಂದು ದಿನಗಳ ಕಾಲ ಪಂಚಾಯತ್ ಕಟ್ಟಡದ ಮುಂಭಾಗ ಅನಿರ್ಧಿಷ್ಟಾವಧಿ ಧರಣಿಯನ್ನು ನಡೆಸಿದ್ದರು. ಆ ಸಂದರ್ಭ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ತಹಶೀಲ್ದಾರ್ ಸ್ಥಳಕ್ಕೆ ಬಂದು ಹಲವು ಭರವಸೆಗಳನ್ನು ನೀಡಿದ್ದರು.
ಮೂರು ತಿಂಗಳಲ್ಲಿ ಸಮಸ್ಯೆ ಬಗೆಹರಿಸಿ ಹಕ್ಕು ಪತ್ರ ಪಡೆದಿರುವ ಎಲ್ಲಾ ಕುಟುಂಬಗಳಿಗೂ ನಿವೇಶನ ಸ್ವಾಧೀನ ನೀಡುವುದಾಗಿ ತಿಳಿಸಿದ್ದರು. ಅದರಂತೆ ಅಧಿಕಾರಿಗಳ ಮಾತಿನ ಮೇಲೆ ನಂಬಿಕೆ ಇಟ್ಟು ಅನಿರ್ಧಿಷ್ಟಾವಧಿ ಧರಣಿ ಹಿಂಪಡೆದುಕೊಂಡಿದ್ದರು.
ಕಲ್ಲಾಡಿ ಎಂಬಲ್ಲಿ ಮಂಜೂರಾಗಿದ್ದ 15 ಫಲಾನುಭವಿ ಕುಟುಂಬಗಳಿಗಷ್ಟೇ ನಿವೇಶನ ನೀಡಿದ್ದರು. ಆದರೆ, ಅಂಬಲೊಟ್ಟಿನಲ್ಲಿ 80 ಕುಟುಂಬಗಳಿಗೆ ಸಮಸ್ಯೆ ಬಗೆಹರಿಸಿ ನಿವೇಶನ ಹಂಚಿಕೆಯ ಭರವಸೆ ಈಡೇರಿರಲಿಲ್ಲ. ಹಾಗಾಗಿ ಇಂದು ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಸಾಂಕೇತಿಕ ಧರಣಿ ನಡೆಸಿದ್ದೇವೆ. ವಿಳಂಬ ಇಲ್ಲದೆ ಜಮೀನು ಸ್ವಾಧೀನ ನೀಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತನಾಡಿದ ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು, ಮುಂದಿನ 15 ದಿನಗಳ ಒಳಗಾಗಿ ಗ್ರಾಮದಲ್ಲಿರುವ ಕುಮ್ಕಿ ರಹಿತ ಜಾಗವನ್ನು ಗುರುತಿಸಿ ನಿವೇಶನ ಹಂಚಿಕೆಗೆ ಕೃಮ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ವಿವರಣೆ ನೀಡಲು ಗ್ರಾಮ ಕರಣಿಕ ಮುತ್ತಪ್ಪ ಮುಂದಾದಾಗ ಧರಣಿನಿರತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಧರಣಿನಿರತರನ್ನು ಸಮಾಧಾನಪಡಿಸಿದ ತಹಶೀಲ್ದಾರ್, ಮುಂದಿನ ಒಂದು ವಾರದಲ್ಲಿ ಕುಮ್ಕಿ ರಹಿತ ಜಾಗವನ್ನು ಗುರುತಿಸಿ, ನಿವೇಶನ ರಹಿತರಿಗೆ ಜಾಗ ಹಂಚಿಕೆ ಮಾಡಲಾಗದಿದ್ದ ಪಕ್ಷದಲ್ಲಿ 2026ರ ಜನವರಿ ಒಳಗೆ ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿದರು.
ಅಂತಿಮವಾಗಿ ತಹಶೀಲ್ದಾರ್ ಅವರ ಭರವಸೆ ಒಪ್ಪಿಕೊಂಡ ಸಂತ್ರಸ್ತರು ಧರಣಿಯನ್ನು ಹಿಂಪಡೆದರು.
ಈ ವೇಳೆ ತಹಶೀಲ್ದಾರ್ ಜತೆಗೆ ಕುಪ್ಪೆಪದವು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಕ್ಷಿತಾ ಡಿ. ಗ್ರಾಮಕರಣಿಕ ಮುತ್ತಪ್ಪ ಹಾಗೂ ಕಂದಾಯ ಸಿಬ್ಬಂದಿ ಇದ್ದರು.
ಧರಣಿಯಲ್ಲಿ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಮುಖಂಡರಾದ ಸದಾಶಿವ ದಾಸ್, ಸಮಿತಿಯ ಸಂಚಾಲಕಿ ವಸಂತಿ ಕುಪ್ಪೆಪದವು ಭಾಗವಹಿಸಿ ಮಾತನಾಡಿದರು.