ಕೋಸ್ಟ್‌ಗಾರ್ಡ್‌ಗೆ ಕಮಾಂಡರ್ ಭೇಟಿ: ಪರಿಶೀಲನೆ
Tuesday, November 18, 2025
ಮಂಗಳೂರು: ಕರಾವಳಿ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್- ಪಶ್ಚಿಮ)ಯ ಪ್ರಾದೇಶಿಕ ಕಮಾಂಡರ್ ಐ.ಜಿ. ಭಿಶಮ್ ಶರ್ಮಾ ನವ ಮಂಗಳೂರಿನ ಕರ್ನಾಟಕ ಕರಾವಳಿ ರಕ್ಷಣಾ ಪಡೆಯ ಕೋಸ್ಟ್ ಗಾರ್ಡ್‌ಗೆ ಭೇಟಿ ನೀಡಿ ಅಲ್ಲಿಯ ಸನ್ನದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ನ.12ರಿಂದ 17ರವರೆಗೆ ನವ ಮಂಗಳೂರಿನ ಕರಾವಳಿ ರಕ್ಷಣಾ ಪಡೆಯ ಪ್ರಧಾನ ಕಚೇರಿಯ ಭೇಟಿಯ ಸಂದರ್ಭ ಅವರು, ಕಾರ್ಯಾಚರಣೆ, ಆಡಳಿತಾತ್ಮಕ ಮತ್ತು ಮೂಲಸೌಕರ್ಯಗಳ ಸನ್ನದ್ಧತೆಯ ಕುರಿತು ಪರಿಶೀಲಿಸಿದರು.
ಈ ಸಂದರ್ಭ ಕರಾವಳಿ ರಕ್ಷಣಾ ಪಡೆಯ ಪ್ರಮುಖ ರಕ್ಷಣಾ ಹಡಗುಗಳಾದ ಸಮರ್ಥ್, ಸಕ್ಷಮ್, ಸುಚೇತ್, ಸುಜೀತ್ ಮತ್ತು ವಿಕ್ರಮ್ಗಳಲ್ಲಿ ಸಮುದ್ರದಲ್ಲಿ ಯುದ್ಧ ಸನ್ನದ್ಧತೆ ಹಾಗೂ ಕಾರ್ಯಾಚರಣೆಯನ್ನು ವೀಕ್ಷಿಸಿದರು. ಯುದ್ಧ ನೌಕೆಗಳ ಕಾರ್ಯಾಚರಣೆಯ ದಕ್ಷತೆ, ಸುರಕ್ಷತಾ ಪ್ರೋಟೋಕಾಲ್ಗಳ ಅನುಸರಣೆ ಮತ್ತು ಸಿಬ್ಬಂದಿ ಕಾರ್ಯದಕ್ಷತೆಯ ಪರಿಶೀಲಿಸಿ ಸಲಹೆ, ಸೂಚನೆಗಳನ್ನು ನೀಡಿದರು.
ಅಧಿಕಾರಿ ಮತ್ತು ಸಿಬ್ಬಂದಿ ಜತೆ ಮಾತುಕತೆ ನಡೆಸಿದರಲ್ಲದೆ, ಸಿಬ್ಬಂದಿಯ ವೃತ್ತಿಪರತೆ, ಕಠಿಣ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ಸಮುದ್ರದ ಗಡಿಗಳನ್ನು ರಕ್ಷಿಸುವಲ್ಲಿ ಕರಾವಳಿ ರಕ್ಷಣಾ ಪಡೆಯ ಬದ್ಧತೆಯನ್ನು ಸ್ಮರಿಸಿದ ಅವರು, ಯಾವುದೇ ಸಂದರ್ಭದಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧತೆಯ ಮಹತ್ವವನ್ನು ವಿವರಿಸಿದರು.