ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ: ಅಡ್ಡ ದಾರಿಯಲ್ಲಿ ಅಧಿಕಾರ ಹಿಡಿಯುವವರ ಬಗ್ಗೆ ಎಚ್ಚರ ಇರಲಿ
ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜನರನ್ನು ದಾರಿ ತಪ್ಪಿಸುತ್ತಾ ಎದುರಾಳಿ ಬಿಲಿಷ್ಠವಾಗುತ್ತಿದ್ದಾರೆ. ಕೋಮುವಾದವನ್ನು ಹರಡಿ ಅಧಿಕಾರ ಹಿಡಿಯುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಶಾಂತಿ ನೆಲೆಸಿದೆ..
ದ.ಕ. ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಇದರಿಂದಾಗಿ ಬಂಡವಾಳ ಹೂಡಿಕೆಯಾಗುತ್ತಿದೆ. ಉದ್ಯೋಗ ದೊರೆಯುತ್ತಿದೆ. ಮುಂದೆ ಇನ್ನಷ್ಟು ಅವಕಾಶಗಳು ದೊರೆಯಲಿದೆ. ಯಾವುದೇ ಮಾಫಿಯಾಗಳು ತಲೆಯೆತ್ತಲು ಬಿಡಬಾರದು. ಯಾರೇ ತಪ್ಪುಮಾಡಿದರೂ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಇದು ಮುಂದುವರಿಯಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಗುರುಪುರ ಕಾಂಗ್ರೆಸ್ನ ಗಟ್ಟಿ ನೆಲ. ಇದು ರಮಾನಾಥ ರೈಯವರ ನಾಲ್ಕು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರದೇಶ. ಗುರುಪುರ, ಕೈಕಂಬದಲ್ಲಿ ಕಾಂಗ್ರೆಸ್ನ ಗತ ವೈಭವ ಮತ್ತೆ ಮೇಲೈಸಲಿದೆ ಎಂದರು,
ದ.ಕ. ಜಿಲ್ಲೆಯಲ್ಲಿ ಆರೋಗ್ಯ ಕ್ರಾಂತಿಯಾಗುತ್ತಿದೆ. ಅಶಾಂತಿಯಲ್ಲಿದ್ದ ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪಿಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದ ಇನಾಯತ್ ಅಲಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಗುರುಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಸುಧೀರ್ ಮುರೊಳ್ಳಿ ಮತ್ತಿತರರು ಮಾತನಾಡಿದರು.
ಇದೇ ವೇಳೆ ಬ್ಲಾಕ್ನ ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕಂಬಳಿಯವರು ನೂತನ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ರಿಗೆ ಅಧಿಕಾರ ಹಸ್ತಾಂತರಿಸಿದರು. ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ವಿವಿಧ ಪಕ್ಷಗಳ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಕ್ಷದ ಮುಖಂಡರಾದ ಪದ್ಮರಾಜ್ ಪೂಜಾರಿ, ಯು.ಪಿ.ಇಬ್ರಾಹೀಂ, ವಿಶ್ವಾಸ್ ದಾಸ್, ಇಬ್ರಾಹೀಂ ನವಾಝ್, ಮಂಜುನಾಥ ಭಂಡಾರಿ, ಅನಿಲ್ ಕುಮಾರ್, ಅಪ್ಪಿ, ಬಿ.ಎಲ್. ಪದ್ಮನಾಭ, ಪುರುಷೋತ್ತಮ ಚಿತ್ರಾಪುರ, ಬಾಷಾ ಗುರುಪುರ ಮತ್ತಿತರರು ಉಪಸ್ಥಿತರಿದ್ದರು.