ಆಳ್ವಾಸ್ ನಲ್ಲಿ ಬೆಳಕಿನ ಹಬ್ಬ "ದೀಪಾವಳಿ"ಯ ಸಂಭ್ರಮ: ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ

ಆಳ್ವಾಸ್ ನಲ್ಲಿ ಬೆಳಕಿನ ಹಬ್ಬ "ದೀಪಾವಳಿ"ಯ ಸಂಭ್ರಮ: ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ


ಮೂಡುಬಿದಿರೆ: ಸರ್ವಧರ್ಮಗಳ ಸಮಭಾವ, ಭಾರತೀಯತೆಯ ಭ್ರಾತೃತ್ವ, ಸೌಹಾರ್ದತೆಯ ಸಮಗ್ರತೆ ಎಂಬಂತೆ ಸರ್ವ ಧರ್ಮೀಯರ ಹಾಗೂ ದೇಶದ ಏಕತೆಯ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಬುಧವಾರ ಸಂಜೆ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ಬೆಳಕಿನ ಹಬ್ಬ 'ಆಳ್ವಾಸ್ ದೀಪಾವಳಿ-2025' ಸಂಭ್ರಮದಿಂದ ಆಚರಿಸಿತು. 


ಮೆರವಣಿಗೆ:

ಕೊಂಬು, ಕಹಳೆ, 30 ಶ್ವೇತ ಛತ್ರಿ ಚಾಮರದ ಜೊತೆ, 100ಕ್ಕೂ ಅಧಿಕ ದೇವಕನ್ಯೆಯರು, ವೇದಘೋಷ ತಂಡ, ಸುಶೋಭಿತ ಕೊಡೆ, ಪ್ರಣತಿ ಹಿಡಿದ ದೇವಕನ್ನಿಕೆಯರು, ನಾಗಸ್ವರದ ನಿನಾದ ಹಾಗೂ ಪುಟಾಣಿಗಳ ಜೊತೆ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ, ಯತಿವರ್ಯರು ಹಾಗೂ ಅತಿಥಿಗಳು ಮೆರವಣಿಗೆ ಮೂಲಕ ಸಭಾಂಗಣವನ್ನು ಪ್ರವೇಶಿಸಿದರು. ಕದೋನಿ (ಸಿಡಿಮದ್ದು), ಸಾಂಪ್ರದಾಯಿಕ ಮೆರವಣಿಗೆಯಿಂದ ಸಭಾಂಗಣವು ಜಾತ್ರೆಯಂತೆ ಕಂಗೊಳಿಸಿತು.


ಪರ್ಬ:

ಕೃಷಿ ಪ್ರಧಾನವಾದ ಮಾತೃಮೂಲೀಯ ತುಳುನಾಡಿನ 'ಪರ್ಬ'ದ (ದೀಪಾವಳಿ ಹಬ್ಬ) ಮಾದರಿಯಲ್ಲಿ ಮೊದಲಿಗೆ ಗೋ ಪೂಜೆ ನಡೆಯಿತು. ಅವಲಕ್ಕಿ, ಬೆಲ್ಲ, ಭತ್ತ, ನೀರ್ ದೋಸೆ, ಬಾಳೆ ಹಣ್ಣು ನೀಡಿ ಗೋವನ್ನು ಸತ್ಕರಿಸಲಾಯಿತು. ಆರತಿ ಬೆಳಗಿ ಆರಾಧಿಸಲಾಯಿತು.

ಬಳಿಕ ಕಳಸೆ, ನೇಗಿಲು, ನೊಗ,  ಮುಡಿ ಕಟ್ಟುವ ಕೊದಂಟಿ, ಕತ್ತಿ, ಹಾರೆ, ಇಸ್ಮುಳ್ಳು, ಕೊಯ್ತಿ ಸೇರಿದಂತೆ ಸಮಗ್ರ ಕೃಷಿ ಪರಿಕರಗಳು, ಹಣ್ಣು ಹಂಪಲು, ಕರಾವಳಿಯ ಗದ್ದೆಯ ನಾಟಿ ತರಕಾರಿ ಬೆಳೆಗಳು, ದವಸ ಧಾನ್ಯಗಳ ಪೂಜೆಯ ಮೂಲಕ 'ಸಿರಿ-ಸಂಪತ್ತು -ಸಮೃದ್ಧಿಯನ್ನು ನಾಡಿಗೆ ಹರಸಲಾಯಿತು.

ವೇದಿಕೆ ಮುಂಭಾಗದಲ್ಲಿ ತುಳಸಿ ಪೂಜೆ ನಡೆಯಿತು. ಕದಿರು ಕಟ್ಟಿ ಮನೆ ತುಂಬಿಸುವ ಸಮೃದ್ಧಿಯನ್ನು ಆಶಿಸಲಾಯಿತು. 

ನಂತರದ ದೇವಾರಾಧನೆಯಲ್ಲಿ  ವಿದ್ಯಾ ಅಧಿಪತಿ ಸರಸ್ವತಿ, ಸಂಪತ್ತಿನ ದೇವಿ ಲಕ್ಷ್ಮೀ ದೇವರ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ದೀಪಾರಾಧನೆ ಮಾಡಿ ಪೂಜಿಸಲಾಯಿತು.

ಪಂಚ ಯತಿವರ್ಯ ನಮನ:

ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಗುರು ರಾಮಾಂಜನೇಯ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಸ್ವಾಗತಿಸಿ, ಗೌರವಿಸಲಾಯಿತು.

ಮೂರು ನೂರಕ್ಕೂ ಹೆಚ್ಚು  ಲಂಗ ದಾವಣಿ ತೊಟ್ಟು ಮಲ್ಲಿಗೆ ಮುಡಿದ ಬಾಲಕಿಯರು, ಪುಟಾಣಿಗಳು ಒಟ್ಟು ವೇದಿಕೆಯ ಮೆರುಗು  ಹೆಚ್ಚಿಸಿದರು.

ಜ್ಞಾನ ಸಂದೇಶ:

'ಅನ್ಯರಿಗೆ ಅನ್ಯಾಯ ಆಗದಂತೆ ಬದುಕುವುದೇ ಭಾರತೀಯತೆ. ಶ್ರಮ ಬದುಕು ಸಾರ್ಥಕತೆಯ ಎಲ್ಲವೂ ದೇವರು' ಎಂದು 'ದೀಪಾವಳಿ' ಸಂದೇಶ ನೀಡಿದ  ಬಾರಕೂರು ದಾಮೋದರ ಶರ್ಮಾ ವ್ಯಾಖ್ಯಾನಿಸಿದರು.

'ಜೀವನಕ್ಕೆ ದುಡ್ಡು ಮಾತ್ರ ಸಂಪತ್ತಲ್ಲ. 'ವಿದ್ಯೆ, ವಿವೇಕ, ವಿನಯ' ನಮ್ಮ ಸಂಪತ್ತು ಎಂಬ ಸಂದೇಶವನ್ನು ಆಳ್ವಾಸ್ ಸಾಕಾರಗೊಳಿಸಿದೆ' ಎಂದು ಶ್ಲಾಘಿಸಿದರು.

'ಭಾ' ಎಂದರೆ ಬದುಕು. 'ರತಿ' ಎಂದರೆ ಆಟ. ತಾಯಿ ಭಾರತಿ(ಭಾರತ) ಎಂದರೆ ಬದುಕಿನ ಆಟ. ಅದುವೇ ದೀಪಾವಳಿ ಎಂದರು.

ವ್ಯಯಿಸಿದಷ್ಟು ಹೆಚ್ಚಾಗುವುದು ಜ್ಞಾನ.  ಆಳ್ವಾಸ್ ಆವರಣದಲ್ಲಿ ನಿರಂತರ ಜ್ಞಾನದ ದೀಪಾವಳಿ. ನಿತ್ಯ ದೀಪೋತ್ಸವ. ವಿದ್ಯಾರ್ಥಿಗಳು ಈ  ಜ್ಯೋತಿಯ ಕಿರಣಗಳು' ಎಂದರು.

'ಆತ್ಮದ, ಪ್ರೀತಿಯ ಬೆಳಕು ಬೆಳಗಬೇಕು. ಅರಿಷಡ್ವರ್ಗಗಳ ಕತ್ತಲಿನಿಂದ ಹೊರಗೆ ಬರಬೇಕು' ಎಂದು ಅವರು ಆಶಿಸಿದರು.

ದೀಪಾವಳಿ ಆಚರಣೆಗೂ ಮೊದಲು ಮಂಗಳೂರಿನ ಮೂಕಾಂಬಿಕಾ ಚೆಂಡೆ ಬಳಗದಿಂದ ಚೆಂಡೆ, ವಯೋಲಿನ್, ಕೊಳಲು ಮತ್ತು ಕೀಬೋರ್ಡ್ ಸ್ವರಗಳ ಮೂಲಕ ಮೂಡಿಬಂದ 'ಸಿಂಗಾರಿ ಮೇಳ' ಇಂಪು ನೀಡಿತು.

ಕರ್ನಾಟಕದ ಮೊದಲ ಸಿಂಗಾರಿ ಮೇಳ ಎಂಬ ಖ್ಯಾತಿಗೆ ಪಾತ್ರವಾದ ಯುವ ತಂಡವು ಸಾಂಪ್ರದಾಯಿಕ ಹಾಗೂ ಕಾಂತಾರ ಮತ್ತು ಕನ್ನಡ, ತಮಿಳು, ಮಲೆಯಾಳ ಸಿನಿಮಾ ಹಾಡುಗಳಿಗೆ ನಿನಾದ ಹೊಮ್ಮಿಸಿದರು. 

ಸಾಂಸ್ಕೃತಿಕ ವೈಭವ:

ಆರಾಧನೆಯ ಬಳಿಕ ಆಚರಣೆಯ ಭಾಗವಾಗಿ ದೀಪಾವಳಿಯ ಸಂಭ್ರಮದ ವೇದಿಕೆಯಲ್ಲಿ 'ಆಳ್ವಾಸ್ ಸಾಂಸ್ಕೃತಿಕ ವೈಭವ' ಮೇಳೈಸಿತು. 

ಮೊದಲಿಗೆ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ನಿರ್ದೇಶನದಲ್ಲಿ ಮೂಡಿ ಬಂದ 'ಅಷ್ಟಲಕ್ಷ್ಮೀ' ಭರತನಾಟ್ಯವು ಐಶ್ವರ್ಯ ಹರಸಿತು.

ಶಿವ-ಪಾರ್ವತಿ ಆದರ್ಶ ದಾಂಪತ್ಯದ -ಸಾಂಗತ್ಯದ ಭಾವ ನೀಡುವ 'ಶಂಕರಾರ್ಧ ಶರೀರಿಣಿ'  ರೂಪಕವು ಬಡಗುತಿಟ್ಟು ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಗೊಂಡಿತು. ಶಿವಪಾರ್ವತಿ ಕಲ್ಯಾಣದಲ್ಲಿ ತೆರೆಕಂಡಿತು.

ಅನಂತರ ಕೃಷ್ಣ-ರಾಧೆಯರ ಮೋಹಕತೆ. ನವರಾತ್ರಿಯ ನವದುರ್ಗೆಯ ಆರಾಧನೆ ಸಂದರ್ಭದಲ್ಲಿ ಗುಜರಾತಿನಲ್ಲಿ ನರ್ತಿಸುವ ಗಾರ್ಭ ಮತ್ತು ದಾಂಡಿಯಾದ ನೃತ್ಯ. ರಾಧಾ-ಶ್ಯಾಮ ನರ್ತನವು ವಿದ್ಯಾರ್ಥಿ ಸಾಗರದ ನಡುವೆ ಪ್ರೀತಿಯ ಅಲೆ ಸೃಷ್ಟಿಸಿತು. ಜಡೆ ಕೋಲಾಟ, ಬಿಂದಿಗೆ, ತ್ರಿಶೂಲ ಆಕರ್ಷಣೆ ಹೆಚ್ಚಿಸಿದವು. 

ಅಚ್ಚುಕಟ್ಟಾದ ಆಂಗಿಕ ಚಲನೆ ಹಾಗೂ ಲಯದಲ್ಲಿ ಮೂಡಿಬಂದ ಸಂಸ್ಥೆ ಯ ವಿದ್ಯಾರ್ಥಿಗಳ ಯೋಗ ಪ್ರದರ್ಶನ 'ಯೋಗದೀಪಿಕಾ' ಸ್ವಾಸ್ಥ್ಯ, ಪ್ರಕೃತಿ ಮಹತ್ವ ತಿಳಿಸಿತು.

 ನಿತೇಶ್ ಮಾನಾ೯ಡು ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article