ಕಲ್ಲಬೆಟ್ಟು ಸಹಕಾರಿ ಸಂಘದ ಸಿಇಒ ಮರುನೇಮಕಕ್ಕೆ ಹೈಕೋರ್ಟ್ ಆದೇಶ
Monday, November 3, 2025
ಮೂಡುಬಿದಿರೆ: ಕಲ್ಲಬೆಟ್ಟು ಸಹಕಾರಿ ಸಂಘದ ಮುಖ್ಯ ಕಾಯ೯ನಿರ್ವಹಣಾಧಿಕಾರಿ ಅನಿತಾ ಶೆಟ್ಟಿ ಅವರನ್ನು ಮತ್ತೆ ಸಿಇಒ ಹುದ್ದೆಗೆ ಮರುನೇಮಕ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅನಿತಾ ಶೆಟ್ಟಿ ಅವರನ್ನು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಿಂಬಡ್ತಿ ನೀಡಿ ಆದೇಶ ಹೊರಡಿಸಿದ್ದರು. ಆದೇಶ ರದ್ದು ಪಡಿಸುವಂತೆ ಸೊಸೈಟಿ ಗ್ರಾಹಕರು ಪ್ರತಿಭಟನೆ ನಡೆಸಿದ್ದರು. ಹಿಂಬಡ್ತಿ ಆದೇಶವನ್ನು ರದ್ದುಪಡಿಸುವಂತೆ ಶಾಸಕ ಉಮಾನಾಥ ಕೋಟ್ಯಾನ್ ಕೂಡ ಸಹಾಯಕ ನಿಬಂಧಕರನ್ನು ಒತ್ತಾಯಿಸಿದ್ದರು. ಆದೇಶ ರದ್ದುಕೋರಿ ಸಿಇಒ ಹೈಕೋರ್ಟ್ ಮೆಟ್ಟಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನಿಯಮಾನುಸಾರ ವಿಚಾರಣೆ ನಡೆಸದೆ ಸಿಇಒ ಅವರನ್ನು ರದ್ದುಗೊಳಿಸಿರುವ ಕ್ರಮ ಸರಿ ಅಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಸಿಇಒ ಅವರನ್ನು ಮೊದಲಿದ್ದ ಹುದ್ದೆಗೆ ಮರುನೇಮಕಗೊಳಿಸುವಂತೆ ಆದೇಶ ನೀಡಿದೆ.