ಮೂಡುಬಿದಿರೆಗೆ ಶೀಘ್ರದಲ್ಲೇ ತಾಲ್ಲೂಕು ಕಾನೂನು ಸೇವಾ ಸಮಿತಿ: ಜೈಬುನ್ನೀಸ
Wednesday, November 19, 2025
ಮೂಡುಬಿದಿರೆ: ಈಗಾಗಲೇ ರಾಜ್ಯದಲ್ಲಿ 149 ತಾಲ್ಲೂಕು ಕಾನೂನು ಸೇವಾ ಸಮಿತಿ ಕೆಲಸ ಮಾಡುತ್ತಿವೆ. ಇಲ್ಲಿನ ವಕೀಲರ ಬೇಡಿಕೆಯಂತೆ ಮೂಡುಬಿದಿರೆಯಲ್ಲೂ ಶೀಘ್ರದಲ್ಲೇ ತಾಲ್ಲೂಕು ಕಾನೂನು ಸೇವಾ ಸಮಿತಿ ಅಸ್ತಿತ್ವಕ್ಕೆ ಬರಲಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಜೈಬುನ್ನೀಸ ಹೇಳಿದರು.
ಅವರು ಇಲ್ಲಿನ ಎಂಸಿಎಸ್ ಸೊಸೈಟಿಯಲ್ಲಿ ಮಂಗಳವಾರ ನಡೆದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಂಭ್ರಮದ ಐದನೇ ದಿನದ ಕಾರ್ಯಕ್ರಮದಲ್ಲಿ ಸಹಕಾರ-ಉಚಿತ ಕಾನೂನು ಸೇವೆ ವಿಷಯದ ಕುರಿತು ಮಾತನಾಡಿದರು.
ಗಾಳಿ, ನೀರು ತಾರತಮ್ಯ ಇಲ್ಲದೆ ಎಲ್ಲರಿಗು ಸಿಗುತ್ತಿದೆ. ಹಾಗೇನೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಪಡೆಯುವ ಹಕ್ಕಿದ್ದು ಅದರಲ್ಲಿ ತಾರತಮ್ಯ ಆಗಬಾರದು. ಕೋರ್ಟ್ ನಲ್ಲಿ ಬಗೆಹರಿಯದ ಪ್ರಕರಣಗಳು, ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನಗಳಲ್ಲಿ ಬಗೆಹರಿಸಲು ಪ್ರತಿ ಜಿಲ್ಲೆಯಲ್ಲಿ ಲೋಕ ಅದಾಲತ್‌ಗಳನ್ನು ನಡೆಸಲಾಗುತ್ತದೆ. ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ‍್ಯನಿರ್ವಹಿಸುತ್ತವೆ. ಈ ಸೇವೆಯು ಸಂಪೂರ್ಣ ಉಚಿತವಾಗಿದ್ದು ತ್ವರಿತಗತಿಯಲ್ಲಿ ನ್ಯಾಯ ಸಿಗುತ್ತದೆ. ಮೂಡುಬಿದಿರೆ ಜನತೆಗೂ ಇಂತಹ ಸೌಲಭ್ಯ ಸಿಗಲು ತಾಲ್ಲೂಕು ಕಾನೂನು ಸೇವಾ ಸಮಿತಿ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದರು. ಸಹಕಾರ ಸಂಘಗಳ ಪ್ರಕರಣಗಳನ್ನು ಕೂಡ ಲೋಕ ಅದಾಲತ್ ವ್ಯಾಪ್ತಿಗೆ ತರಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ಭುವನಜ್ಯೋತಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಶಿರ್ತಾಡಿ ಇಲ್ಲಿನ ಪ್ರಾಂಶುಪಾಲ ಪ್ರದೀಪ ಎಮ್.ಡಿ, ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ನಿರ್ದೇಶಕರಾದ ಪ್ರೇಮಾ ಸಾಲ್ಯಾನ್, ಅನಿತಾ ಪಿ. ಶೆಟ್ಟಿ, ಅಶೋಕ್ ಕಾಮತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು.
ಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು. ಚೇತನಾ ಆರ್. ಹೆಗ್ಡೆ ಮತ್ತು ಗಣೇಶ್ ಕಾಮತ್ ಕಾಯ೯ಕ್ರಮ ನಿರೂಪಿಸಿದರು. ಬ್ಯಾಂಕ್ ಸಿಬಂದಿ ಸುದರ್ಶನ್ ವಂದಿಸಿದರು.
