ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು: ಗರಿ ಗೆದರಿದ ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ
Sunday, November 30, 2025
ಪುತ್ತೂರು: ಯಶಸ್ಸನ್ನು ಪಡೆಯಲು ಪ್ರತಿ ಕೆಲಸದಲ್ಲೂ ಪರಿಪೂರ್ಣತೆ ಇರಬೇಕಾಗಿದ್ದು, ಕಾಲೇಜು ಶಿಕ್ಷಣ ನಮಗೆ ಈ ಸಾಮರ್ಥ್ಯವನ್ನು ನೀಡಬೇಕಾಗಿದೆ. ಶಿಕ್ಷಣವು ಕೇವಲ ಪದವಿಯನ್ನು ನೀಡುವ ವ್ಯವಸ್ಥೆಯಾಗಿದೆ, ವಿದ್ಯಾರ್ಥಿಗಳಿಗೆ ಯಶಸ್ಸನ್ನು ತೋರಿಸುವ ದಾರಿದೀಪವಾಗಬೇಕು ಎಂದು ಸಂತ ಫಿಲೋಮಿನಾ ಪದವಿ (ಸ್ವಾಯತ್ತ)ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಲಿಯೋ ನೋರೋನ್ನ ಅವರು ಹೇಳಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ನ.28 ಹಾಗೂ 29 ರಂದು ಕಾಲೇಜು ಪ್ರಾಂಗಣದಲ್ಲಿ ನಡೆದ ‘ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ’ದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಜೀವನದಲ್ಲಿ ಸ್ಪಷ್ಟವಾದ ಗುರಿಯೊಂದಿಗೆ ನಾವು ಮುಂದುವರಿಯಬೇಕಿದ್ದು, ವಿದ್ಯೆಯು, ನಮ್ಮ ಗುರಿಯನ್ನು ತಲುಪಲು ಭದ್ರವಾದ ಅಡಿಪಾಯವನ್ನು ನೀಡುತ್ತದೆ. ಜೀವನದಲ್ಲಿ ಯಶಸ್ಸು ಅಷ್ಟು ಸುಲಭವಾಗಿ ದೊರಕದು. ಯಶಸ್ಸಿನ ಹಾದಿ ಅತ್ಯಂತ ಕಠಿಣವಾಗಿದ್ದು, ಇಂತಹ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಬರಬೇಕು ಎಂದು ತಿಳಿಸಿದರು.
ಗೌರವ ಅತಿಥಿಗಳಾಗಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ. ಆಂಟೋನಿ ಪ್ರಕಾಶ್ ಮೊಂತೇರೋ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಶ್ರೀ ಪ್ರಕಾಶ್. ಬಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ವಂ. ಫಾ. ಲಾರೆನ್ಸ್ ಮಸ್ಕರೇನಸ್ ವಿದ್ಯಾರ್ಥಿಗಳಿಗೆ ಸಾಧನೆಯ ಮಹತ್ವವನ್ನು ತಿಳಿಸಿದ ಅವರು, ಸಾಧನೆಗೆ ಮೂಲ ಮೆಟ್ಟಿಲು ವಿದ್ಯಾರ್ಥಿ ಜೀವನವಾಗಿದ್ದು, ಈ ಮಹತ್ವದ ಘಟ್ಟದಲ್ಲಿ ಸೂಕ್ತ ಮಾರ್ಗದರ್ಶನದೊಂದಿಗೆ ಸರಿಯಾದ ದಾರಿಯಲ್ಲಿ ನಡೆದರೆ ಸಾದಿಸುವುದು ಸುಲಭ ಎಂದು ತಿಳಿಸಿದರು. ನೀವು ಎಷ್ಟೇ ದೊಡ್ಡ ಸಾಧನೆಯನ್ನು ಮಾಡಿದರೂ, ನಿಮ್ಮ ಹೆತ್ತವರ ಶ್ರಮ ಮತ್ತು ತ್ಯಾಗವನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು. ಕಷ್ಟಪಟ್ಟು ಓದಿ ಸಾರ್ಥಕ ಜೀವನವನ್ನು ಮುನ್ನಡೆಸಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ ಮತ್ತು ರೋವರ್ಸ್ ರೇಂಜರ್ಸ್‌ನ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾಲೇಜಿನಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ವತ್ಸಲಾ ಪಿ. ಹಾಗೂ ಭೌತಶಾಸ್ತ್ರ ವಿಭಾಗದ ಪ್ರಯೋಗಾಲಯ ಸಹಾಯಕ ಜೋಸೆಫ್ ಮಸ್ಕರೇನ್ಹಸ್ ಅವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ಎಂ. ದೀಪಾ ನಾಯಕ್(591), ಅದಿತಿ (591), ಫಿದಾ ಹಲೀಮ (591), ನೀತಿ ಎನ್.ಬಿ. (591), ಆನ್ಸಿನ ರೇಜೀ (591) ಇವರನ್ನು ಸನ್ಮಾನಿಸಲಾಯಿತು.
ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಪ್ರತಿ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಸಕ್ತ ವರ್ಷದ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಪ್ರಸಕ್ತ ವರ್ಷದ ‘ಬಹುಮುಖ ಪ್ರತಿಭೆ’ ಪ್ರಶಸ್ತಿಯನ್ನು ದ್ವಿತೀಯ ವಿಜ್ಞಾನ ವಿಭಾಗದ ಅಪೂರ್ವ ಮತ್ತು ಸಮಗ್ರ ಪ್ರಶಸ್ತಿಯನ್ನು ದ್ವಿತೀಯ ಪಿ.ಸಿ. ಎಂ.ಬಿ-ಸಿ ತರಗತಿಗೆ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿ’ಕೋಸ್ಟಾ ಹಾಗೂ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ದಿವ್ಯಾ ಅನಿಲ್ ರೈ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಗೋವಿಂದ ಪ್ರಕಾಶ್ ಸಿ. ಎಚ್, ಕವಿತಾ ಕೆ ಹಾಗೂ ಪಿಲೋಮಿನಾ ಮೊಂತೇರೋ ಮತ್ತು ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪ್ತಿ ಕೆ.ಸಿ. ಸ್ವಾಗತಿಸಿ, ಕಾರ್ಯದರ್ಶಿ ತೇಜಸ್ ಎ.ಕೆ. ವಂದಿಸಿ, ಉಪನ್ಯಾಸಕ ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು.










