ಓದುವ ಸಂಸ್ಕೃತಿಗೆ ನೂತನ ಪ್ರೇರಣೆ: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ, ಮಾರಾಟಮೇಳ

ಓದುವ ಸಂಸ್ಕೃತಿಗೆ ನೂತನ ಪ್ರೇರಣೆ: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ, ಮಾರಾಟಮೇಳ


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರು ಇಲ್ಲಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮತ್ತು ನವಕರ್ನಾಟಕ ಪ್ರಕಾಶನ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025ರ ಅಂಗವಾಗಿ ಐದು ದಿನಗಳ ‘ಪುಸ್ತಕ ಪ್ರದರ್ಶನ-ಮಾರಾಟಮೇಳ’ವನ್ನು ನವೆಂಬರ್ 3ರಂದು ಕಾಲೇಜಿನ ಸಿಲ್ವರ್ ಜುಬಿಲಿ ಸ್ಮಾರಕ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಮೇಳವು ನವೆಂಬರ್ 7ರವರೆಗೆ ನಡೆಯಲಿದೆ.


ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ಉದ್ಘಾಟಿಸಿ ಮಾತನಾಡಿ, ಪುಸ್ತಕಗಳು ನಮ್ಮ ಜೀವನದ ಶಾಶ್ವತ ಸಂಗಾತಿಗಳು. ಅವು ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಸೃಜನಾತ್ಮಕತೆಯನ್ನು ಬೆಳೆಯಿಸುತ್ತವೆ. ತ್ವರಿತ ಮಾಹಿತಿ ಯುಗದಲ್ಲಿ ಪುಸ್ತಕ ಪ್ರದರ್ಶನಗಳು ಮುದ್ರಿತ ಜ್ಞಾನದ ಅವಶ್ಯಕತೆಯನ್ನು ನಮಗೆ ನೆನಪಿಸುತ್ತವೆ ಎಂದು ಹೇಳಿದರು. 


ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮತ್ತು ಬರೆಯುವ ಕ್ರಿಯಾಶೀಲತೆಯನ್ನು ಬೆಳೆಸುವ ಸದುದ್ದೇಶದಿಂದ ಸಂತ ಫಿಲೋಮಿನಾ ಕಾಲೇಜಿನಲ್ಲಿ ನವೆಂಬರ್ ತಿಂಗಳನ್ನು ಗ್ರಂಥಾಲಯ ತಿಂಗಳಾಗಿ ಘೋಷಿಸಿದ್ದೇವೆ. ಆ ಪ್ರಯುಕ್ತ ಐದು ದಿವಸದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ನವಕರ್ನಾಟಕ ಪ್ರಕಾಶನ, ಮಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.


ಮುಖ್ಯ ಅತಿಥಿ ಮಂಗಳೂರಿನ ನವಕರ್ನಾಟಕ ಪ್ರಕಾಶನ, ಮಂಗಳೂರು ಶಾಖೆಯ ವ್ಯವಸ್ಥಾಪಕ ಹರೀಶ್ ಕುಮಾರ್ ಮಾತನಾಡಿ, ಪುಸ್ತಕದ ಮೂಲಕ ಮಾನವ ಕುಲದ ಸೇವೆ ಸಾಧ್ಯ. ವೈಚಾರಿಕ ಪುಸ್ತಕಗಳ ಪ್ರಕಟಣೆಯೇ ನಮ್ಮ ಪ್ರಕಾಶನದ ಧ್ಯೇಯ.ಗುಣಮಟ್ಟದ ಪುಸ್ತಕಗಳನ್ನು ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ. ಇಂತಹ ಪ್ರದರ್ಶನಗಳು ಓದುಗರ ಮತ್ತು ಲೇಖಕರ ನಡುವಿನ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಹರಿನಾರಾಯಣ ಮಾಡಾವು, ನಿವೃತ್ತ ಹಿಂದಿ ಉಪನ್ಯಾಸಕ ಪ್ರೊ. ವಿಷ್ಣು ಭಟ್, ಕಾಲೇಜಿನ ಬೋಧಕ ವೃಂದ, ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು, ವಿದ್ಯಾರ್ಥಿ ಪರಿಷತ್ ಪ್ರತಿನಿಧಿಗಳು ಹಾಗೂ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮವನ್ನು ಉಪನ್ಯಾಸಕ ಪ್ರಶಾಂತ್ ರೈ ಅವರು ನಡೆಸಿಕೊಟ್ಟರು. ಕಾಲೇಜಿನ ಮುಖ್ಯ ಗ್ರಂಥಪಾಲಕ ಅಬ್ದುಲ್ ರಹ್ಮಾನ್ ಜಿ. ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕ ಮನೋಹರ್ ವಂದಿಸಿದರು.

ಸಾಹಿತ್ಯ, ವಿಜ್ಞಾನ, ವಾಣಿಜ್ಯ ನಿರ್ವಹಣೆ, ತಂತ್ರಜ್ಞಾನ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article