ರಥಬೀದಿ ಕಾಲೇಜಿನಲ್ಲಿ 'ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹ-2025'
Thursday, November 6, 2025
ಮಂಗಳೂರು: ಇಲ್ಲಿನ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥನ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ, ಮಂಗಳೂರು ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ 'ಜಾಗೃತಿ ಅರಿವು ಸಪ್ತಾಹ-2025ದ ಅಂಗವಾಗಿ ನ.5 ರಂದು 'ಭ್ರಷ್ಟಾಚಾರ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಲೋಕಾಯುಕ್ತ ಡಿವೈಎಸ್ ಪಿ ಡಾ. ಗಾನ ಪಿ. ಕುಮಾರ್ ಅವರು ಭ್ರಷ್ಟಾಚಾರ ಜಾಗೃತಿಯ ಕುರಿತು ಮಾತನಾಡಿ, ಸರ್ಕಾರದ ವ್ಯವಸ್ಥೆ, ಬಜೆಟ್, ಸರ್ಕಾರಿ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರ ಹಾಗೂ ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಅದರ ಬಗ್ಗೆ ಜನತೆ ಅರಿಯಬೇಕಾದ ಮಾಹಿತಿಗಳ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಕಾನೂನು ಸೇವೆಗಳ ಪ್ರಾಧಿಕಾರದ ವಿಶೇಷ ಸರ್ಕಾರಿ ಅಭಿಯೋಜಕರಾದ ರವಿಂದ್ರ ಮುನ್ನಿಪಾಡಿ ಅವರು 'ಭ್ರಷ್ಟಾಚಾರದ ಪ್ರತಿಬಂಧಕ ಕಾಯ್ದೆ-1998'ಯ ಕುರುತು ಮಾತನಾಡಿ, ಎಸ್.ಸಿ.-ಎಸ್.ಟಿ., ಕಾರ್ಮಿಕರು, ಹಿಂದುಳಿದವರಿಗೆ ಕಾನೂನು ಸೇವೆಗಳ ಪ್ರಾಧಿಕಾರ ಉಚಿತ ಸೇವೆ ಮತ್ತು ಸಲಹೆಗಳನ್ನು ನೀಡುತ್ತದೆ. ಕಾನೂನಿನಿಂದ ವಂಚಿತರಾದವರಿಗೆ ಕಾನೂನಿನ ಅಡಿಗೆ ತರುವ ಕೆಲಸವನ್ನು ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತದೆ ಎಂದು ಹೇಳಿದರು.
ಕಾನೂನು ಸೆವೆಗಳ ಪ್ರಾಧಿಕಾರವು ಯಾರಿಗೆ ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇರುತ್ತದೆ ಅಂತವರಿಗೆ ಉಚಿತವಾಗಿ ಸಲಹೆ ನೀಡುತ್ತದೆ. ಇದರೊಂದಿಗೆ ಪ್ರತೀ ಜಿಲ್ಲೆಗಳಲ್ಲಿ ಡಿಫೆನ್ಸ್ ಕೌನ್ಸಿಲರ್ ಗಳನ್ನು ನೇಮಿಸಿ ಸಲಹೆ ನೀಡಲಾಗುವುದು ಎಂದ ಅವರು ಯಾರು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಶೀಘ್ರವಾಗಿ ನೆರವಿಗೆ ಬರುತ್ತದೆ ಎಂದರು.
1995ರಲ್ಲಿ ಅನುಷ್ಠಾನಗೊಂಡ ನಂತರ ಕಾನೂನಿನ ಅಡಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಿಂದ ಜನಸಾಮಾನ್ಯರು ಕಾನೂನಿನಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಕಾನೂನು ಸೆವೆಗಳ ಪ್ರಾಧಿಕಾರ ಎಲ್ಲಾ ಕ್ಷೇತ್ರಗಳಲ್ಲಿ ಕಾನೂನು ಅರಿವು ಮೂಡಿಸುವುದರೊಂದಿಗೆ ಕಾನೂನು ರಕ್ಷಣೆ ಮತ್ತು ಕಾನೂನಿಗೆ ಗೌರವ ಕೊಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆಯನ್ನು ಸ್ವೀಕರಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಲೋಕಾಯುಕ್ತ ಡಿವೈಎಸ್ ಪಿ ಸುರೇಶ್ ಕುಮಾರ್ ಪಿ., ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರು, ಎಂಕಾಂ ವಿಭಾಗದ ಸಂಯೋಜಕರಾದ ಡಾ. ಲೋಕೇಶ್ ನಾಥ್ ಬಿ., ಕಲಾ ವೇದಿಕೆಯ ಸಮಯೋಜಕರಾದ ಡಾ. ಕೃಷ್ಣಪ್ರಭ, ಲೋಕಾಯುಕ್ತ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಲೋಕಾಯುಕ್ತ ಸಿಬ್ಬಂದಿ ಮಹೇಶ್ ಹೆಚ್.ಸಿ. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.








