‘ನೈತಿಕ ಪೊಲೀಸ್‌ಗಿರಿ’ ಬೆದರಿಕೆ-ವಿದ್ಯಾರ್ಥಿಗೆ ಥಳಿತ
ಪುತ್ತೂರು: ಅಸೌಖ್ಯದಿಂದ ಇರುವ ಸಹಪಾಠಿಯ ಕ್ಷೇಮ ವಿಚಾರಿಸಲು ಆತನ ಮನೆಗೆ ಬಂದ ವಿದ್ಯಾರ್ಥಿಗಳ ತಂಡವೊಂದಕ್ಕೆ ಬೆದರಿಕೆ ಹಾಕಿ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರಿಯಡ್ಕ ಎಂಬಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಮುಸ್ತಾಫ ಮತ್ತು ಮುಸ್ತಾಫ್ ಎಂಬ ಇಬ್ಬರ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೆರಿಯಡ್ಕ ಸಮೀಪದ ವಿದ್ಯಾರ್ಥಿ ಗುತ್ತಿಗೆದಾರ ಪ್ರತಾಪ್ ಪೆರಿಯಡ್ಕ ಎಂಬವರ ಪುತ್ರ ಧನುಷ್ ಎಂಬಾತ ಅಸೌಖ್ಯದಿಂದಿದ್ದು, ಪದವಿ ತರಗತಿಯ ಈತನ ಸಹಪಾಠಿಗಳು ಗುರುವಾರ ಪೆರಿಯಡ್ಕದಲ್ಲಿರುವ ಆತನ ಮನೆಗೆ ಬಂದಿದ್ದರು. ಈ ತಂಡದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿದ್ದರು.
ಧನುಷ್‌ನನ್ನು ಭೇಟಿಯಾಗಿ ವಾಪಾಸು ಉಪ್ಪಿನಂಗಡಿಗೆ ತೆರಳಲು ಪೆರಿಯಡ್ಕಕ್ಕೆ ಬಂದಾಗ ಮುಸ್ತಾಫ ಹಾಗೂ ಕೆಲ ಮಂದಿಯ ತಂಡವೊಂದು ಮುಸ್ಲಿಂ ಹೆಣ್ಣು ಮಕ್ಕಳು ಆತನ ಮನೆಗೆ ಹೋಗಿರುವುದನ್ನು ಆಕ್ಷೇಪಿಸಿ ಪೊಲೀಸರಿಗೆ ಫೋನ್ ಮಾಡುತ್ತೇವೆ. ನಿಮ್ಮ ಮನೆಗೆ ಫೋನ್ ಮಾಡುತ್ತೇವೆ ಎಂದು ವಿದ್ಯಾರ್ಥಿನಿಯರನ್ನು ಬೆದರಿಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ತಂಡದಿಂದ ಥಳಿಸಲ್ಪಟ್ಟ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದು, ಪೆರಿಯಡ್ಕದ ಮುಸ್ತಾಫ ತಂಡದ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಪೆರಿಯಡ್ಕ ನಿವಾಸಿಗಳಾದ ಮುಸ್ತಾಫ ಹಾಗೂ ಮುಸ್ತಾಫ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಮಾನವೀಯ ನಡೆಗೆ ಆಕ್ರೋಶ..
ಸಹಪಾಠಿಯೋರ್ವನ ಕ್ಷೇಮ ಸಮಾಚಾರ ವಿಚಾರಿಸಲು ಬಂದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪೆರಿಯಡ್ಕದ ತಂಡವೊಂದು ಬೆದರಿಕೆ ಹಾಕಿ ವಿದ್ಯಾರ್ಥಿಗೆ ಥಳಿಸಿದ ಪ್ರಕರಣ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೆರಿಯಡ್ಕ ಕೋಮುಸೌಹಾರ್ಧತೆ ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ಈ ತನಕ ಅಂತಹ ಘಟನೆಗಳು ನಡೆದಿಲ್ಲ. ಆದರೆ ಹಿಂದು ವಿದ್ಯಾರ್ಥಿಯ ಮನೆಗೆ ಆರೋಗ್ಯ ವಿಚಾರಿಸಲು ಹೋಗಿದ್ದಾರೆ ಎಂಬ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬೆದರಿಸಿರುವುದು ಈ ಭಾಗದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ಪೆರಿಯಡ್ಕ ನಿವಾಸಿ ಮುಸ್ತಾಫ ಹಾಗೂ ತಂಡದ ಈ ದುಷ್ಪೇರಣಾತ್ಮಕ ನಡೆಗೆ ಸ್ಥಳೀಯವಾಗಿಯೂ ಆಕ್ರೋಶ ವ್ಯಕ್ತವಾಗಿದೆ. ಪೆರಿಯಡ್ಕದಲ್ಲಿರುವ ಕೋಮುಸೌಹಾರ್ಧತೆಯನ್ನು ಕೆಣಕಲು ನಡೆದ ಹುನ್ನಾರ ಇದಾಗಿದೆ ಎಂಬ ಅಭಿಪ್ರಾಯ ಧರ್ಮಭೇದ ರಹಿತವಾಗಿ ವ್ಯಕ್ತವಾಗಿದೆ. ನೈತಿಕ ಪೊಲೀಸ್‌ಗಿರಿಗೆ ಇಳಿದಿರುವ ತಂಡದ ಸದಸ್ಯರನ್ನು ಕಾನೂನಾತ್ಮಕ ರೀತಿಯಲ್ಲಿ ಶಿಕ್ಷೆಗೆ ಒಳಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.