ಶಿರ್ವ ಗ್ರಾ.ಪಂಚಾಯತ್‌ನ್ನು ಪಟ್ಟಣ ಪಂಚಾಯತ್ ಆಗಿ ಪರಿವರ್ತನೆಗೆ ಶ್ರಮಿಸುವೆ: ಲಕ್ಷ್ಮೀ ಹೆಬ್ಬಾಳ್ಕರ್
ಅವರು ಶನಿವಾರ ಶಿರ್ವ ಮಹಿಳಾ ಸೌಧದಲ್ಲಿ ಜರುಗಿದ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 940 ಲಕ್ಷ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾಪು ಕ್ಷೇತ್ರದ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ 10 ಕೋಟಿ ರೂ.ಬಿಡುಗಡೆ ಆಗಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರು ಸ್ವಾಭಿಮಾನದಿಂದ ಜೀವಿಸುವ ಕಾರ್ಯ ಮಾಡಿದ್ದೇನೆ. ಮಹಿಳೆಯರ ಸುರಕ್ಷತೆಗೆ ಅಕ್ಕಾ ಪಡೆ, ಬಹುವಿಧ ಉದ್ಧೇಶದ ಗೃಹಲಕ್ಷ್ಮೀ ಸಹಕಾರಿ ಮಲ್ಟಿಪರ್ಪಸ್ ಬ್ಯಾಂಕ್ ಮಾಡುತ್ತೇವೆ ಎಂದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ರೂ. 1000 ಏರಿಸುತ್ತೇವೆ ಎಂದ ಅವರು ಶಾಸಕರಾದ ಗುರ್ಮೆ ಮತ್ತು ಪಕ್ಷದ ಹಿರಿಯ ನಾಯಕ ಸೊರಕೆಯವರ ಮಾರ್ಗದರ್ಶನದಲ್ಲಿ ಕಾಪು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಸಭಾಧ್ಯಕ್ಷತೆ ವಹಿಸಿದ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ವಿಪರೀತ ಮಳೆಯಿಂದಾಗಿ ರಸ್ತೆ ದುರಸ್ಥಿಗೆ ತೊಂದರೆ ಅಗಿದೆ. ರೋಡ್ ಮತ್ತು ತೋಡು ಎರಡೂ ಬೇಕು. ರಸ್ತೆ ಆಗಿದೆ ಚರಂಡಿ ಆಗಿಲ್ಲ, ಹಾಗಾಗಿ ರಸ್ತೆಗಳು ಹಾಳಾಗಿವೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಡಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕಾಪು ತಾಲೂಕು ಕಾರ್ಯನಿರ್ವಹಕಾಧಿಕಾರಿ ಜೇಮ್ಸ್ ಡಿ’ಸಿಲ್ವ, ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ರಾಜೇಶ್, ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ಶಿರ್ವ ಪಂ. ಕಾರ್ಯದರ್ಶಿ ಚಂದ್ರಮಣಿ, ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎ. ಪೂಜಾರಿ, ಕಾಪು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಮಹಿಳಾ ನಾಯಕಿ ಗೀತಾ ವಾಗ್ಲೆ ಬಂಟಕಲ್ಲು, ಅಶೋಕ್ ಕುಮಾರ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.
ಆಶಿಶ್ ಸುವರ್ಣ ನಿರೂಪಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ಪದ್ಮನಾಭ ನಾಯಕ್ ವಂದಿಸಿದರು.