ಕುಕ್ಕೆ: ಚಂಪಾಷಷ್ಠಿ ಮಹೋತ್ಸವ-ಶೇಷವಾಹನಯುಕ್ತ ಬಂಡಿ ಉತ್ಸವ: ನಾಳೆ ಲಕ್ಷ ದೀಪೋತ್ಸವ
Tuesday, November 18, 2025
ಸುಬ್ರಹ್ಮಣ್ಯ: ಚಂಪಾಷಷ್ಠಿ ಮಹೋತ್ಸವ ಸಂಭ್ರಮದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ರಾತ್ರಿ ಚಂಪಾಷಷ್ಠಿ ಮಹೋತ್ಸವ ಅಂಗವಾಗಿ ಶ್ರೀ ದೇವರ ಉತ್ಸವ ಜರುಗಿತು.
ಸೋಮವಾರ ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ನಡೆದು ಶ್ರೀ ದೇವರ ಉತ್ಸವ ಆರಂಭಗೊಂಡಿತು. ಬಳಿಕ ಚಂಪಾಷಷ್ಠಿ ಮಹೋತ್ಸವ ಅಂಗವಾಗಿ ಶೇಷವಾಹನಯುಕ್ತ ಬಂಡಿ ಉತ್ಸವ ಜರುಗಿತು. ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು. ಮಂಗಳವಾರ ರಾತ್ರಿ ಕೂಡ ಶೇಷ ವಾಹನ ಯುಕ್ತ ಬಂಡಿ ಉತ್ಸವ ಜರಗಿತು.
ನಾಳೆ ಲಕ್ಷ ದೀಪೋತ್ಸವ:
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೋತ್ಸವದ ನಿಮಿತ್ತ ನ.19 ರಂದು ಲಕ್ಷದೀಪೋತ್ಸವ ನಡೆಯಲಿದೆ. ಈ ನಿಮಿತ್ತ ರಾತ್ರಿ ದೇವರ ಚಂದ್ರಮಂಡಲ ರಥೋತ್ಸವ ನಡೆಯಲಿದೆ. ರಥೋತ್ಸವದ ಸಂದರ್ಭ ಕ್ಷೇತ್ರಾದ್ಯಂತ ಲಕ್ಷ ದೀಪಗಳು ಬೆಳಗಲಿವೆ. ದೇವಾಲಯ ಸೇರಿದಂತೆ ಗೋಪುರದ ಬಳಿಯಿಂದ ಕಾಶಿಕಟ್ಟೆವರೆಗೆ ಹಾಗೂ ಆದಿ ಸುಬ್ರಹ್ಮಣ್ಯ ದೇವಳ ಮತ್ತು ದೇವಳದ ಪರಿಸರದಲ್ಲಿ ಲಕ್ಷ ದೀಪಗಳು ಪ್ರಜ್ವಲಿಸಲಿವೆ. ಕುಣಿತ ಭಜನೆಯೂ ನಡೆಯಲಿದೆ. ಕಾಶಿಕಟ್ಟೆಯಲ್ಲಿ ಗಣಪತಿ ದೇವರಿಗೆ ರಂಗಪೂಜೆ ನಡೆದು, ಗುರ್ಜಿ ಉತ್ಸವ ಜರುಗಲಿದೆ.