13ನೇ ವರ್ಷದ ಪಾದಯಾತ್ರೆ ಪೂರ್ವಭಾವಿ ಸಭೆ: ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆಯ ಕರಪತ್ರ ಬಿಡುಗಡೆ

13ನೇ ವರ್ಷದ ಪಾದಯಾತ್ರೆ ಪೂರ್ವಭಾವಿ ಸಭೆ: ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆಯ ಕರಪತ್ರ ಬಿಡುಗಡೆ


ಉಜಿರೆ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ 13ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೇಟ್ನಾಯರ್ ಮಾತನಾಡಿ, ನಮ್ಮ ಸಾತ್ವಿಕ ಶಕ್ತಿಯನ್ನು ತೋರಿಸುವ ಸಲುವಾಗಿ ದಿವಂಗತ ಡಾಕ್ಟರ್ ಬಿ. ಯಶೋವರ್ಮ ಹಾಗು ದಿವಂಗತ ವಿಜಯ ರಾಘವ ಪಡುವೇಟ್ನಾಯರ್ ಮಾರ್ಗದರ್ಶನದಲ್ಲಿ ಕೇವಲ 500 ಜನರಿಂದ ಆರಂಭವಾದ ಈ ಪಾದಯಾತ್ರೆ ಇಂದು ಬೃಹತ್ ಹೆಮ್ಮರವಾಗಿ ಬೆಳೆದಿದೆ. ಹಿರಿಯರು ಮತ್ತು ಊರಿನವರ ಭಕ್ತಿ ಮತ್ತು ಸಹಕಾರದಿಂದ ಇದೊಂದು ಧಾರ್ಮಿಕ ಪರಂಪರೆಯಾಗಿ ಬೆಳೆಯುತ್ತಿದೆ. ಬಹು ಶಿಸ್ತಿನಿಂದ ನಡೆದುಕೊಂಡು ಬಂದಿರುವ ಈ ಪಾದಯಾತ್ರೆ ಇನ್ನು ಮುಂದೆಯೂ ಹೀಗೆ ಸಾಗುತ್ತದೆ ಎಂದರು.

ಮಾಜಿ ಎಂ.ಎಲ್.ಸಿ ಹಾಗೂ ಮಂಗಳೂರು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಪ್ರತಿ ಸವಾಲುಗಳನ್ನು ಮೆಟ್ಟಿ ನಾವು ಹೆಜ್ಜೆ ಹಾಕಬೇಕು. ಆರಂಭದಿಂದಲೂ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಕಳಂಕ ಹೊರಿಸುವ ಪ್ರಯತ್ನಗಳು ನಡೆಯುತ್ತಾ ಬಂದಿದೆ. ಧರ್ಮಾಧಿಕಾರಿಗಳಾದ ಕಾವಂದರ ಬಿಳಿಯ ಶುಭ್ರ ವಸ್ತ್ರವನ್ನು ಯಾರೂ ಕಪ್ಪು ಮಾಡಲು ಸಾಧ್ಯವಿಲ್ಲ. ಶ್ರದ್ಧೆ ಮತ್ತು ಭಕ್ತಿಯಿಂದ ನಾವೆಲ್ಲ ಒಟ್ಟು ಸೇರಿ ಈ ಪಾದಯಾತ್ರೆಯನ್ನು ಯಶಸ್ವಿ ಮಾಡೋಣ ಎಂದರು.

ಸಭೆಯಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪೂರನ್ ವರ್ಮ, ದಿನಾಂಕ 15 ರಂದು 2.30ಕ್ಕೆ ಸರಿಯಾಗಿ ಎಲ್ಲರೂ ಶ್ರೀ ಕ್ಷೇತ್ರ ಜನಾರ್ದನ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಸೇರುವರು. ಬಳಿಕ 3 ಗಂಟೆಗೆ ಸರಿಯಾಗಿ 13ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ, 3.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದೆಡೆಗಿನ ಪಾದಯಾತ್ರೆಯ ಮೆರವಣಿಗೆ ಆರಂಭವಾಗುತ್ತದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ದಾರಿ ಯುದ್ಧಕ್ಕೂ ನೀರು ಮತ್ತು ಬೆಲ್ಲದ ವ್ಯವಸ್ಥೆ ಮಾಡಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿದ ಬಳಿಕ 5.30ಕ್ಕೆ ಡಾ. ಡಿ ವೀರೇಂದ್ರ ಹೆಗಡೆಯವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ ಎಂದರು. ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ ಪೈ ಮಾತನಾಡಿದರು.

ಸಾದಶಿವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಹಾಗು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್, ಬೆಳ್ತಂಗಡಿ ತಾಲೂಕಿನ ಜನಜಾಗ್ರತೆ ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ಉಜಿರೆ ಪಂಚಾಯಿತಿ ಅಧ್ಯಕ್ಷೆ ಉಷಾ ಕಾರಂತ್, ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಯೋಗೀಶ್ ಕುಮಾರ್ ನಡಕರ, ಲಕ್ಷ್ಮಿ ಇಂಡಸ್ಟ್ರೀಸ್ ಮಾಲಕರಾದ ಮೋಹನ್ ಕುಮಾರ್, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಹಿರಿಯ ವಕೀಲ ಅಗರ್ತ ಸೇರಿದಂತೆ ಊರಿನ ಸದಸ್ಯರು ಭಾಗಿಯಾಗಿದ್ದರು. 

ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ 13ನೇ ವರ್ಷದ ಪಾದಯಾತ್ರೆಯ ಕರಪತ್ರವನ್ನು ಸರ್ವರ ಸಮ್ಮುಖದಲ್ಲಿ ಗಣ್ಯರಿಂದ ಬಿಡುಗಡೆ ಮಾಡಲಾಯಿತು.

ಸಭೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ರಾಮಕುಮಾರ್ ನಿರೂಪಿಸಿ, ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ವಂದಿಸಿದರು.


ಆರಂಭದಿಂದಲೂ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಕಳಂಕ ಹೊರಿಸುವ ಪ್ರಯತ್ನಗಳು ನಡೆಯುತ್ತಾ ಬಂದಿದೆ. ಧರ್ಮಾಧಿಕಾರಿಗಳಾದ ಪೂಜ್ಯ ಕಾವಂದರ ಬಿಳಿಯ ಶುಭ್ರ ವಸ್ತ್ರವನ್ನು ಯಾರೂ ಕಪ್ಪು ಮಾಡಲು ಸಾಧ್ಯವಿಲ್ಲ. ಶ್ರದ್ಧೆ ಮತ್ತು ಭಕ್ತಿಯಿಂದ ನಾವೆಲ್ಲ ಒಟ್ಟು ಸೇರಿ ಈ ಪಾದಯಾತ್ರೆಯನ್ನು ಯಶಸ್ವಿ ಮಾಡೋಣ. -ಹರೀಶ್ ಕುಮಾರ್, ಮಾಜಿ ಎಂ.ಎಲ್.ಸಿ, ಮಂಗಳೂರು ಮೆಸ್ಕಾಂ ಅಧ್ಯಕ್ಷ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article