ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳ: ನಾಳೆ ಸೇವೆಯಾಟ ಪ್ರಾರಂಭ
Tuesday, November 4, 2025
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟದ ಪೂರ್ವಭಾವಿಯಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ನ.5 ರಂದು ಪ್ರಥಮ ಸೇವೆಯಾಟದ ಮೂಲಕ ಪ್ರಾರಂಭಗೊಳ್ಳಲಿದೆ.
ನ.5 ರಿಂದ 15 ಹಾಗೂ ನ.20 ರಿಂದ 22 ರವರೆಗೆ ಪ್ರತಿ ಸಂಜೆ 7 ರಿಂದ ಸಭಾಭವನದಲ್ಲಿ ಸೇವಾರ್ಥಿಗಳ ಸೇವೆಯ ಯಕ್ಷಗಾನ ಪೌರಾಣಿಕ ಪ್ರಸಂಗ ಪ್ರದರ್ಶಿಸಲ್ಪಡಲಿದೆ. ಕಲಾಭಿಮಾನಿಗಳಿಗೆ ಯಕ್ಷಗಾನ ಸೇವೆಯಾಟಕ್ಕೆ ಸ್ವಾಗತವಿದೆ.
ಕ್ಷೇತ್ರದ ಲಕ್ಷದೀಪೋತ್ಸವದ ಬಳಿಕ ನ.23 ರಂದು ಮೇಳದ ಶ್ರೀ ಮಹಾಗಣಪತಿ ದೇವರ ದಿಗ್ವಿಜಯ ಯಾತ್ರೆ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ತಿರುಗಾಟದ ಮುಂದಿನ ಕ್ಯಾಂಪ್‌ಗೆ ತೆರಳುವ ಮೂಲಕ ಪ್ರಸಕ್ತ ಸಾಲಿನ ಸಂಚಾರ ಪ್ರಾರಂಭಗೊಳ್ಳಲಿದೆ ಎಂದು ಮೇಳದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.