ನ.15ರಿಂದ 20 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವಾರ್ಷಿಕ ಲಕ್ಷದೀಪೋತ್ಸವವು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನ.15 ರಂದು ಮೊದಲ್ಗೊಂಡು ನ.20 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನ.15 ರಂದು ಬೆಳಗ್ಗೆ ಪ್ರೌಢ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಸಂಜೆ ಭಕ್ತಾದಿಗಳಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭಕ್ತಿ ಭಜನೆಯ ಪಾದಯಾತ್ರೆ ನಡೆಯಲಿದೆ.
ರಾತ್ರಿ ಶ್ರೀ ಮಂಜುನಾಥ ಸ್ವಾಮಿಗೆ ಹೊಸಕಟ್ಟೆ ಉತ್ಸವ, ನ.16 ರಂದು ಕೆರೆಕಟ್ಟೆ ಉತ್ಸವ, ನ.17 ರಂದು ಲಲಿತೋದ್ಯಾನ ಉತ್ಸವ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾಗೋಷ್ಠಿ ನಡೆಯಲಿದೆ.
ನ.18 ರಂದು ಕಂಚಿಮಾರುಕಟ್ಟೆ ಉತ್ಸವ ಹಾಗೂ ಸರ್ವಧರ್ಮ ಸಮ್ಮೇಳನ, ನ.19 ರಂದು ಗೌರಿಮಾರುಕಟ್ಟೆ ಉತ್ಸವ ಹಾಗೂ ಸಾಹಿತ್ಯ ಸಮ್ಮೇಳನ, ನ.20 ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷ ದೀಪೋತ್ಸವ ಸಮಾಪನ್ನಗೊಳ್ಳಲಿದೆ. ನಾಡಿನಾದ್ಯಂತದಿಂದ ಲಕ್ಷಾಂತರ ಭಕ್ತಾದಿಗಳು ಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.