ಉಜಿರೆಯಿಂದ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವ ಪಾದಯಾತ್ರೆ
ಉಜಿರೆ: ತಮಸೋಮಾ ಜ್ಯೋತಿರ್ಗಮಯ-ಕತ್ತಲಿನಿಂದ ಬೆಳೆಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವ ಹಿನ್ನೆಲೆಯಲ್ಲಿ ಕಾರ್ತೀಕ ಮಾಸದ ಮಂಗಳ ಪರ್ವದಲ್ಲಿ ಸರ್ವಧರ್ಮ ಸಮನ್ವಯ ಕ್ಷೇತ್ರ ವೆಂಬ ಹೆಗ್ಗಳಿಕೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಸುಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಸಮಸ್ತ ಭಕ್ತ ವರ್ಗ ಜಾತಿ,ಮತ,ಧರ್ಮ ಭೇದ ಮರೆತು ಒಂದಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭಕ್ತಿ ಭಜನೆಯ ಪಾದಯಾತ್ರೆಯಲ್ಲಿ ತಮ್ಮ ಮನಸ್ಸಿನ ಆಶಯ, ಬೇಡಿಕೆಗಳನ್ನು ನಿವೇದಿಸುವ ಮಹಾಪರ್ವ ನ.15 ರಂದು ಶನಿವಾರ ಮದ್ಯಾಹ್ನ 3 ಕ್ಕೆ ಉಜಿರೆಯಲ್ಲಿ ಸಮಾವೇಶಗೊಂಡು ಪಾದಯಾತ್ರೆ ಧರ್ಮಸ್ಥಳಾ ಭಿಮುಖವಾಗಿ ಸಾಗಿ ಬರಲಿದೆ.
ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಆರಂಭಗೊಳ್ಳುವ ಶುಭದಿನದಂದು ಕ್ಷೇತ್ರದ ಭಕ್ತವೃಂದ, ಅಭಿಮಾನಿಗಳು ಮತ್ತು ಹಿತೈಷಿಗಳು ಸೇರಿ ಸಮಸ್ತ ಮಹಾಜನತೆ ಒಗ್ಗಟ್ಟಿನಿಂದ "ಓಂ ನಮಃ ಶಿವಾಯ ನಮಃ’ ನಾಮ ಮಂತ್ರ ಪಠಿಸುತ್ತ ಶಿಸ್ತಿನ ಸಿಪಾಯಿಗಳಾಗಿ ಹೆಜ್ಜೆಹಾಕಲಿದ್ದಾರೆ. ಮದ್ಯಾಹ್ನ 3.30ಕ್ಕೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಲೋಕಸುಭಿಕ್ಷೆ,ಸುಖ,ಶಾಂತಿ,ನೆಮ್ಮದಿಗಾಗಿ ಸಾಮೂಹಿಕವಾಗಿ ಸಂಪ್ರಾರ್ಥಿಸಿ ಧ್ವಜಸ್ಥಂಭದ ಬಳಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರಿಂದ ದೀಪ ಪ್ರಜ್ವಲನೆ ಮೂಲಕ 13ನೇ ವರ್ಷದ ಭಕ್ತಿ ಭಜನೆಯ ಪಾದಯಾತ್ರೆಗೆ ಚಾಲನೆ ದೊರೆಯಲಿದೆ.
ಸಹಸ್ರ ಸಹಸ್ರ ಮಂದಿ ಭಕ್ತಾದಿಗಳು ತಮ್ಮ ಕಷ್ಟ ಕಾರ್ಪಣ್ಯಗಳನ್ನು ನೆನೆದು ಶ್ರೀ ಸ್ವಾಮಿಯಲ್ಲಿ ನಿವೇದಿಸಿಕೊಂಡು ಸಾಗುವ ಪಾದಯಾತ್ರೆ ಧರ್ಮಸ್ಥಳ ಮಹಾದ್ವಾರ ತಲುಪಿದಾಗ ಅಲ್ಲಿ ಕ್ಷೇತ್ರದ ವತಿಯಿಂದ ಭವ್ಯ ಸ್ವಾಗತ ನೀಡಲಾಗುವುದು. ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿ ಮುಂಭಾಗದಲ್ಲಿ ಪ್ರಾರ್ಥಿಸಿ, ಬಳಿಕ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪಾದಯಾತ್ರಿಗಳನ್ನುದ್ದೇಶಿಸಿ ಆಶೀರ್ವಚನ ನೀಡಲಿದ್ದಾರೆ.
ಭಕ್ತಿ-ಭಾವ-ತ್ಯಾಗ ಮನೋಭಾವಗಳನ್ನೊಳಗೊಂಡ ಸಮಸ್ತ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ಭಗವಂತನ ದಿವ್ಯಾನುಗ್ರಹಕ್ಕೆ ಭಾಜನರಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.