ವಿಶೇಷ ಚೇತನ ಮಕ್ಕಳಿಗೆ ನಲ್ಮೆ, ಸಂಯಮದಿಂದ ವಿಶೇಷ ಭವಿಷ್ಯ ರೂಪಿಸೋಣ: ಡಿ. ವೀರೇಂದ್ರ ಹೆಗ್ಗಡೆ

ವಿಶೇಷ ಚೇತನ ಮಕ್ಕಳಿಗೆ ನಲ್ಮೆ, ಸಂಯಮದಿಂದ ವಿಶೇಷ ಭವಿಷ್ಯ ರೂಪಿಸೋಣ: ಡಿ. ವೀರೇಂದ್ರ ಹೆಗ್ಗಡೆ


ಉಜಿರೆ: ವಿಶೇಷ ಚೇತನ ಮಕ್ಕಳು ಇತರ ಮಕ್ಕಳ ಹಾಗೇ ಸಶಕ್ತರು. ಕುಟುಂಬ ಹಾಗೂ ಅವರ ಒಡನಾಟದಲ್ಲಿರುವವರ ಪ್ರೀತಿ, ನಲ್ಮೆ ಹಾಗೂ ಸಂಯಮ ಅವರ ಅಭಿವೃದ್ಧಿಗೆ ಹಾಸುಗಲ್ಲಾಗುತ್ತದೆ. ವಿಶೇಷ ಚೇತನ ಮಕ್ಕಳು ವಿದ್ಯಾಬ್ಯಾಸ ಪಡೆದು ಉದ್ಯೋಗ ಪಡೆಯಲು ಅರ್ಹರಾದಾಗ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಉದ್ಯೋಗವನ್ನು ನೀಡುವುದನ್ನು ನಾವು ಉತ್ತೇಜಿಸಿದಾಗ ಮಾತ್ರ ಅವರ ಶೈಕ್ಷಣಿಕ ಪರಿಶ್ರಮಕ್ಕೆ ಪ್ರತಿಫಲ ಸಿಗಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.


ಮಂಗಳೂರಿನ ವಾಮಂಜೂರು ಎಸ್.ಡಿ.ಎಂ. ಮಂಗಳಜ್ಯೋತಿ ಸಮಗ್ರ ಶಾಲೆ (ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ (ರಿ) ಉಜಿರೆ ಇದರ ಆಡಳಿತಕ್ಕೊಳಪಟ್ಟಿದೆ)ಯಲ್ಲಿ ನಡೆದ ಎಸ್.ಡಿ.ಎಂ. ಮಂಗಳಜ್ಯೋತಿ ರಜತ ಮಹೋತ್ಸವ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು.


ಐವತ್ತು ವರ್ಷಗಳ ಹಿಂದೆ ದಿವಂಗತ ಮೋಹಿನಿ ಅಪ್ಪಾಜಿ ನಾಯ್ಕ್ ಅವರು ಕಂಡ ಕನಸು ಇಂದು ಸಾರ್ಥಕತೆಯನ್ನು ಪಡೆಯುತ್ತಿದೆ. ಇಂದು ಮಂಗಳಜ್ಯೋತಿ ಶಾಲೆಯ ಮಕ್ಕಳು ವಿದ್ಯಾಬ್ಯಾಸ, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ. ಇದು ಸಮಗ್ರ ಶಾಲೆಯ ಆಶಯವು ಆಗಿತ್ತು ಎಂದು ಹೇಳಿದರು.

ವಿಶೇಷ ಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ: ಮೋಹನ್ ಆಳ್ವ

ಅಂಗಾಂಗ ನ್ಯೂನ್ಯತೆಯನ್ನು ಹೊಂದಿರುವ ಮಕ್ಕಳು ಕೀಳರಿಮೆಯನ್ನು ಹೊಂದದೆ ನಮ್ಮವರಲ್ಲಿ ಒಬ್ಬರಾಗಲು ನಾವೆಲ್ಲರೂ ಸಂವೇದನಾಶೀಲರಾಗಬೇಕು. ಈ ನಿಟ್ಟಿನಲ್ಲಿ ಎಸ್‌ಡಿಎಂ ಮಂಗಳ ಜ್ಯೋತಿಯಂತಹ ಸಮಗ್ರ ಶಾಲೆಗಳು ಸಹಬಾಳ್ವೆ ಹಾಗೂ ಸಹಾನುಭೂತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತವೆ ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಆಶಯ ನುಡಿಗಳನ್ನಾಡಿದರು.

ವಿಶೇಷ ಚೇತನ ಮಕ್ಕಳು ಇತರ ಮಕ್ಕಳೊಂದಿಗೆ ಅನ್ಯೋನ್ಯತೆಯಿಂದ ತಮ್ಮ ಬಾಲ್ಯ ಕಳೆಯುವುದು ಹಾಗೂ ಸಮಗ್ರ ಶಿಕ್ಷಣವನ್ನು ನೀಡಿ ಬಾಲ್ಯದಿಂದಲೇ ಕೀಳರಿಮೆಯ ಬೇರನ್ನು ಕೀಳುವುದು ಈ ಶಾಲೆಯ ಧ್ಯೇಯ. ಈ ನಿಟ್ಟಿನಲ್ಲಿ ದಿ. ಮೋಹಿನಿ ನಾಯಕ್ ಅವರು ಅಂದು ಸ್ಥಾಪಿಸಿದ ಸಮಗ್ರ ಶಾಲೆ ಎಂಬ ಪರಿಕಲ್ಪನೆ ಇಡೀ ಜಗತ್ತೇ ಶ್ಲಾಘಿಸುವಂತಹ ನಡೆ ಎಂದು ಸ್ಮರಿಸಿದರು. ಕಾಲಾನಂತರ ಈ ಶಾಲೆಯ ಜವಾಬ್ದಾರಿಯನ್ನು ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಮಡಿಲಿಗೆ ಪಡೆದರು. ಈ ನಡೆ  ಇಂದು ಮಂಗಳಜ್ಯೋತಿ ಎಂಬ ವಿಶೇಷ ಚೇತನ ಮಕ್ಕಳ ಜೀವನ ಜ್ಯೋತಿಯಾಗಿ ಬೆಳಗಲಾರಂಬಿಸಿ ಇಂದು 25 ಸಂವತ್ಸರಗಳು ತುಂಬಿವೆ ಎಂದು ಸಂತಸಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯು ಈಗಿನ ಕಾಲಘಟ್ಟದಲ್ಲಿಯೂ ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿ. ಮನುಷ್ಯ ಮನುಷ್ಯನಿಗಾಗಿ ಮಿಡಿಯಬೇಕು ಎಂಬುದನ್ನ ಈ ಶಾಲೆ ಸಾರಿಹೇಳುತ್ತದೆ. ಸಂಯಮ, ಪ್ರೀತಿ ಹಾಗೂ ಸಹಾನುಭೂತಿಯಿಂದ ನಾವು ವಿಶೇಷ ಚೇತನರನ್ನು ಸ್ವೀಕರಿಸಿದಾಗ ಮಾನವೀಯತೆಯ ಅಸ್ತಿತ್ವಕ್ಕೆ ಬೆಳೆನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ವಿಶೇಷ ಅಭ್ಯಾಗತರಾದ ಮಂಗಳೂರು ಮಹಾನಗರಪಾಲಿಕೆ ಮಾಜಿ ಮೇಯರ್ ಭಾಸ್ಕರ್ ಕೆ. ಹಾಗೂ ಗೌರವ ಉಪಸ್ಥಿತರಿದ್ದ ಮಂಗಳೂರು ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ರಾಘವೇಂದ್ರ ಎಸ್. ಭಟ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುಜಾತ ಆರ್. ಶೆಟ್ಟಿ-ಸಂಸ್ಥಾಪಕಿ ದಿ ಮೋಹಿನಿ ಎ. ನ್ಯಾಕ್‌ರವರ ಪುತ್ರಿ, ಎ. ಕಿಶೋರ್ ರಾವ್-ಆಡಳಿತ ನಿರ್ದೇಶಕರು, ಅರವಿಂದ ಮೋಟಾರ್ಸ್ ಮಂಗಳೂರು, ಪ್ರೊ. ಎ. ರಾಜೇಂದ್ರ ಶೆಟ್ಟಿ-ಕಾರ್ಯದರ್ಶಿ, ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ.), ಮಂಗಳೂರು, ಬಾಲಕೃಷ್ಣ ಅಲೆ-ನಿರ್ದೇಶಕರು, ಆಡಳಿತ ಮಂಡಳಿ ಕರ್ಣಾಟಕ ಬ್ಯಾಂಕ್, ಮಂಗಳೂರು, ಪ್ರಕಾಶ್‌ಚಂದ್ರ ಶೆಟ್ಟಿ-ಲೆಕ್ಕಪರಿಶೋಧಕರು, ಮಂಗಳೂರು, ದೇವಿಕಾ ವಸಂತ್-ಹಳೆವಿದ್ಯಾರ್ಥಿನಿ, ಎಸ್.ಡಿ.ಎಂ. ಮಂಗಳಜ್ಯೋತಿ ಸಮಗ್ರ ಶಾಲೆ, ರಾಘವೇಂದ್ರ ನೆಲ್ಲಿಕಟ್ಟೆ-ಅಧ್ಯಕ್ಷರು, ರೋಟರಿ ಸಂಸ್ಥೆ, ಮಂಗಳೂರು (ಪೂರ್ವ), ಮೋಹನ್ ಕೊಪ್ಪಲ್-ಅಧ್ಯಕ್ಷರು, ಲಯನ್ಸ್ ಕ್ಲಬ್, ಕೊಡಿಯಾಲ್ ಬೈಲ್, ಮಂಗಳೂರು, ಪ್ರದೀಪ್ ಜಿ. ಪೈ-ಆಡಳಿತ ನಿರ್ದೇಶಕರು, ಹ್ಯಾಂಗೋ ಐಸ್‌ಕ್ರೀಂ, ಮಂಗಳೂರು, ನಾರಾಯಣ ಎಸ್.-ಖಜಾಂಚಿ, ಅಂಗವಿಕಲರ ಕಲ್ಯಾಣ ಸಂಸ್ಥೆ(ರಿ.), ಮಂಗಳೂರು, ಡಾ. ಕೆ. ದೇವರಾಜ್-ಮುಖ್ಯ ಪ್ರಧಾನ ವ್ಯವಸ್ಥಾಪಕರು (ನಿವೃತ್ತ), ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ) ಉಜಿರೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಎಸ್‌ಡಿ.ಎಂ., ಶಿಕ್ಷಣ ಸಂಸ್ಥೆ (ರಿ) ಉಜಿರೆಯ ಖಜಾಂಜಿ ಡಾ. ಕೆ. ದೇವರಾಜ್, ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪೊ. ಎ. ರಾಜೇಂದ್ರ ಶೆಟ್ಟಿ. ಮಂಗಳ ಜ್ಯೋತಿ ಶಾಲೆಯ ಸಂಸ್ಥಾಪಕರಾದ ದಿ. ಮೋಹಿನಿ ಎ. ನಾಯ್ಕ್ ಅವರ ಪುತ್ರಿ ಆರ್. ಸುಜಾತಾ ಶೆಟ್ಟಿ ಹಾಗೂ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ದಿ. ಮೋಹಿನಿ ಎ. ನಾಯ್ಕ್ ಯವರ ಪುತ್ಥಳಿ ಅನಾವರಣಗೊಳಿಸಲಾಯಿತು. ಶಾಲೆಯ ರಜತ ಮಹೋತ್ಸವದ ಸ್ಮರಣ ಸಂಚಿಕೆ ‘ಬೆಳ್ಳಿ ತೇರು’ ಪುಸ್ತಕ ಬಿಡುಗಡೆಗೊಳಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article