ಗುಣಮಟ್ಟದ ಸೇವೆಯಲ್ಲಿ ಮೆಸ್ಕಾಂ ಇಲಾಖೆ: ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್
ಅವರು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ರಾಜ್ಯದಲ್ಲಿ ವಿದ್ಯುತ್‌ಗೆ ಕೊರತೆ ಇಲ್ಲ. ಕೆಲವೊಂದು ತಾಂತ್ರಿಕ ಅಡಚಣೆಯಿಂದ ಬಳಕೆದಾರರಿಗೆ ಪೂರೈಕೆಯಲ್ಲಿ ವ್ಯತ್ಯಯಗಳು ಬರಬಹುದೇ ವಿನಃ ವಿದ್ಯುತ್ ಕೊರತೆಯಿಂದ ಸಮಸ್ಯೆ ಬರಲಾರದು ಎಂದರು.
ಇಲಾಖೆಯಲ್ಲಿ ಲೈನ್‌ಮ್ಯಾನ್ ಸಿಬ್ಬಂದಿಗಳ ಕೊರತೆ ಇದೆ. ಈ ಕೆಲಸಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣವಾಗಿದೆ. ಈಗಾಗಲೆ ಮೆಸ್ಕಾಂ ವಿಭಾಗಕ್ಕೆ 400 ಲೈನ್ ಮ್ಯಾನ್‌ಗಳ ನೇಮಕವಾದರೂ 390 ಲೈನ್ ಮ್ಯಾನ್‌ಗಳು ವರ್ಗಾವಣೆಗೊಳ್ಳುತ್ತಿದ್ದಾರೆ ಎಂದರು.
ಬೆಳ್ತಂಗಡಿ ತಾಲೂಕಿನಲ್ಲಿ 4967 ಟ್ರಾನ್ಸ್ ಪಾರ್ಮರ್ ಗಳಿದ್ದು ಹೆಚ್ಚುವರಿ 1000 ಟ್ರಾನ್ಸ್ ಪಾರ್ಮರ್‌ಗಳ ಅಗತ್ಯವಿದೆ. ವಿವಿಧ ಕಾಮಗಾರಿಯಲ್ಲಿ 12.72 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದೆ ಎಂದರು.
ಗಂಗಾ ಕಲ್ಯಾಣ ಅಭಿವೃದ್ಧಿ ಕಾಮಗಾರಿ ಮುಗಿದಿದ್ದು ಪ.ಜಾತಿ, ಪಂಗಡಗಳ ಕಾಲೊನಿ ಅಭಿವೃದ್ಧಿಗೆ 4.5 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದ ಅವರು ಕುತ್ಲೂರು, ಕಕ್ಕಿಂಜೆ, ನಿನ್ನಿಕಲ್ಲಿನಲ್ಲಿ ಹೊಸ ಫೀಡರ್ ಕಾಮಗಾರಿ ನಡೆಯುತ್ತಿದೆ ಎಂದರು.
ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಫೀಡರ್ ಅಗುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಫೀಡರ್ ಕಾಮಗಾರಿಗೆ ಸ್ವಲ್ಪ ವಿಳಂಬವಾಗುತ್ತಿದೆ. ಶೀಘ್ರವಾಗಿ ಇದು ಮುಗಿಯಲಿದ್ದು ಬಳಿಕ ನಗರದ ವಿದ್ಯುತ್ ಸಮಸ್ಯೆ ಪರಿಹಾರವಾಗಲಿದೆ ಎಂದರು.
ಮೆಸ್ಕಾಂ ವಿಭಾಗದಲ್ಲಿ 1,25,335 ಸಂಪರ್ಕವಿದ್ದು ಇದರಲ್ಲಿ 31,545 ಕೃಷಿ ಪಂಪ್ ಸೆಟ್ ಸಂಪರ್ಕವಿದೆ. ಸೋಲಾರ್‌ನಿಂದ ವಿದ್ಯುತ್ ಸಂಗ್ರಹ ಅಗುತ್ತಿದ್ದು ಕೆಲವು ಪವರ್ ಪ್ರಾಜೆಕ್ಟ್‌ಗಳಿದ್ದರೂ ಇದರಿಂದ ವಿದ್ಯುತ್ ಉತ್ಪಾದನೆ ಅಗುತ್ತಿಲ್ಲ. ಜನರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಗುರಿ ಎಂದರು.
ಯಾವುದೇ ಸಮಸ್ಯೆ ಬಂದರೂ ಅದನ್ನು ಪರಿಹರಿಸಲು ಮೆಸ್ಕಾಂ ಸಿದ್ದವಾಗಿದ್ದು, ಸಿಬ್ಬಂದಿಗಳು ಜನ ಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯದಿಂದ ಇರುವಂತೆ ಸೂಚಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅದ್ಯಕ್ಷ ಪದ್ಮನಾಭ ಸಾಲ್ಯಾನ್, ಜಿ.ಪಂ. ಮಾಜಿ ಸದಸ್ಯ ಶೇಖರ್ ಕುಕ್ಕೆಡಿ ಉಪಸ್ಥಿತರಿದ್ದರು.