ಶಾಸಕರು ಜನಪ್ರಿಯತೆಗಿಂತ ಜನಪರವಾಗಿರುತ್ತಿದ್ದರೆ ಉಳ್ಳಾಲದಲ್ಲಿ ಸರಕಾರಿ ಆಸ್ಪತ್ರೆಗಳು ಕಡೆಗಣನೆಗೆ ಒಳಗಾಗುತ್ತಿರಲಿಲ್ಲ: ಸಂತೋಷ್ ಬಜಾಲ್
ಅವರು ಇಂದು ಡಿವೈಎಫ್‌ಐ ಹರೇಕಳ ಘಟಕದ ನೇತೃತ್ವದಲ್ಲಿ ಉಳ್ಳಾಲದಲ್ಲಿ 100 ಬೆಡ್‌ಗಳ ತಾಲೂಕು ಆಸ್ಪತ್ರೆಗಳ ಸಹಿತ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ ಹಾಗೂ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು, ಕಿದ್ವಾಯಿ, ಜಯದೇವ ಸರಕಾರಿ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲು ಒತ್ತಾಯಿಸಿ ಗ್ರಾಮಚಾವಡಿ ಜಂಕ್ಷನ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಉಳ್ಳಾಲದ ಸಮುದಾಯ ಆಸ್ಪತ್ರೆ ಸೇರಿದಂತೆ ಹರೇಕಳ, ಕುರ್ನಾಡು ಆರೋಗ್ಯಕೇಂದ್ರಗಳು ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜು ಆಡಳಿತದ ನಿಯಂತ್ರಣಕ್ಕೆ ಒಳಪಟ್ಟಿದೆ. ಹಾಲಿ ಸ್ಪೀಕರ್, ಮಾಜಿ ಆರೋಗ್ಯ ಮಂತ್ರಿಯೊಬ್ಬರ ಕ್ಷೇತ್ರದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಗೊಳಿಸಲು ಈವರೆಗೂ ಸಾಧ್ಯವಾಗಿಲ್ಲ. ಇಲ್ಲಿನ ಸರಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳು ಬಳಸಲು ಬೆಡ್, ಮೇಜು, ಕುರ್ಚಿ ಇಲ್ಲದಿದ್ದರೂ ಪರವಾಗಿಲ್ಲ ತಮ್ಮ ಕಚೇರಿಗೆ ಮಾತ್ರ ಐಸಾರಾಮಿ ಮಂಚ, ಮೇಜು, ಕುರ್ಚಿ, ಸೋಫಗಳೇ ಬೇಕಾ ಎಂದು ಟೀಕಿಸಿದರು.
ದ.ಕ. ಜಿಲ್ಲೆಯಲ್ಲಿ ಜನಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದಂತೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಹೆಚ್ಚಾಗತೊಡಗಿದೆ. ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸುವ ಅನಿವಾರ್ಯತೆ ಸೃಷ್ಟಿಯಾದ್ದರಿಂದ ಬಡವರು, ಮಧ್ಯಮವರ್ಗದವರು ಇಂತಹ ಕಾಯಿಲೆಗಳಿಗೆ ಹೆಚ್ಚಿನದ್ದನ್ನು ಕಳೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸರಕಾರ ಕ್ಯಾನ್ಸರ್ ಚಿಕಿತ್ಸೆಗೆ ಕಿದ್ವಾಯಿ, ಹೃದ್ರೋಗ ಕಾಯಿಲೆಗೆ ಜಯದೇವ ಆಸ್ಪತ್ರೆ ಘಟಕಗಳನ್ನು ಈ ಜಿಲ್ಲೆಯಲ್ಲೂ ಕೂಡಲೇ ಸ್ಥಾಪಿಸಲು ಕ್ರಮಕೈಗೊಳ್ಳಬೇಕು, ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಇಂತಹ ಹೋರಾಟಗಳನ್ನು ತೀವೃಗೊಳಿಸಲು ನಿರ್ಧರಿಸಿದೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್‌ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ಮಾತನಾಡಿ, ಉಳ್ಳಾಲದಲ್ಲಿ ತಾಲೂಕು ಆಸ್ಪತ್ರೆ ನಿರ್ಮಿಸಲು ಮುಂದಾಗದೇ ಇದ್ದರೆ ಡಿವೈಎಫ್‌ಐ ಹೋರಾಟ ತೀವೃಗೊಳ್ಳುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ರಜಾಕ್ ಮುಡಿಪು, ಸ್ಥಳೀಯ ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ, ರಫೀಕ್ ಹರೇಕಳ, ಇಬ್ರಾಹಿಂ ಮದಕ, ಇಕ್ಬಾಲ್, ಹೈದರ್, ಹನೀಫ್ ಹರೇಕಳ, ಅಬೂಬಕ್ಕರ್ ಜಲ್ಲಿ, ಉಮರಬ್ಬ, ಬಶೀರ್, ಜನಾರ್ದನಾ, ಇಸ್ಮಾಯಿಲ್, ಆಶಿಕ್, ಬದ್ರುದ್ದೀನ್, ಸತ್ತಾರ್ ಫಾರೂಕ್ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.
ಡಿವೈಎಫ್‌ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ಸ್ವಾಗತಿಸಿ, ವಂದಿಸಿದರು.
