ಅಂತರ್ ರಾಜ್ಯ ಕುಖ್ಯಾತ ಕಳ್ಳನ ಬಂಧನ: ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಬಂಧಿತ ಆರೋಪಿಯನ್ನು ಮಂಗಳೂರಿನ ಜೋಕಟ್ಟೆ ನಿವಾಸಿ ಅಬುಬಕ್ಕರ್ ಯಾನೆ ಅಬ್ದುಲ್ ಖಾದರ್ ಯಾನೆ ಇತ್ತೆ ಬರ್ಪೆ ಅಬುಬಕ್ಕರ್ (70) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ ಸುಮಾರು 5,65,000 ರೂ. ಬೆಲೆಬಾಳುವ ಒಟ್ಟು 56.850 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಮಂಗಳೂರು ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ 60,000ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ವಿವರ:
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೂರಿನಲ್ಲಿ ಅ.2 ರಿಂದ 6ರ ನಡುವೆ ಬೀಗ ಹಾಕಿದ್ದ ಮನೆಯೊಂದರಲ್ಲಿ ನಡೆದ ಸುಮಾರು 149 ಗ್ರಾಂ. ತೂಕದ ಒಟ್ಟು 9,50,000 ರೂ. ಮೌಲ್ಯದ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 85/2025 ಕಲಂ 331(1), 331(4), 305 ಬಿ.ಎನ್. ಎಸ್. 2023 ರಂತೆ ಪ್ರಕರಣ ದಾಖಲಾಗಿತ್ತು.
ಆರೋಪಿಯ ಪತ್ತೆ ಕಾರ್ಯಚರಣೆಯಲ್ಲಿ ಬೆಳ್ತಂಗಡಿ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಂತೆ, ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಾಪೂರ ಮಠ ಅವರ ನೇತೃತ್ವದಲ್ಲಿ ವೇಣೂರು ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅಕ್ಷಯ್ ಡವಗಿ, ಓಮನ ಎನ್. ಹಾಗೂ ಎಎಸ್‌ಐಗಳಾದ ವೆಂಕಟೇಶ್ ನಾಯ್ಕ, ಬೆನ್ನಿಚ್ಚನ್, ಹೆಡ್‌ಕಾನ್ಸ್‌ಟೇಬಲ್‌ಗಳಾದ ಕೃಷ್ಣ, ಪ್ರಶಾಂತ್, ಕಾನ್‌ಸ್ಟೇಬಲ್‌ಗಳಾದ ಚರಣ್, ಬಸವರಾಜ್, ಮೋಹನ್, ಜಯಶ್ರೀ, ರಜಿತ್, ಮಂಗಳೂರು ಜಿಲ್ಲಾ ಗಣಕ ಯಂತ್ರದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ ಭಾಗವಹಿಸಿದ್ದರು.