ಕಿರಾಣಿ ಅಂಗಡಿಯಿಂದ ನಗದು ಸಹಿತ ಸಾಮಾಗ್ರಿ ಕಳವು
ಬಂಟ್ವಾಳ: ಬಿಸಿ ರೋಡಿನ ಕಿರಾಣಿ ಅಂಗಡಿಯೊಂದರ ಹಿಂಬದಿ ಕಿಟಕಿ ಮುರಿದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಪರ್ಲಿಯಾ ನಿವಾಸಿ ಮೊಹಮ್ಮದ್ ಡಿ. (63) ಎಂಬವರ ಬಿಸಿ ರೋಡಿನಲ್ಲಿರುವ ಕಿರಾಣಿ ಅಂಗಡಿಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಬೆಳಿಗ್ಗೆ 8 ಗಂಟೆಗೆ ಅಂಗಡಿ ತೆರೆಯಲೆಂದು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಅಂಗಡಿಯ ಹಿಂದಿನ ಭಾಗದ ಕಿಟಕಿ ಹೊಡೆದು ಒಳ ಪ್ರವೇಶಿಸಿದ ಕಳ್ಳರು ಅಂಗಡಿಯಲ್ಲಿದ್ದ ಸುಮಾರು 60 ಸಾವಿರ ರೂ. ಮೌಲ್ಯದ ಸಿಗರೇಟ್ ಪ್ಯಾಕೇಟ್, 18 ಸಾ.ರೂ. ಮೌಲ್ಯದ ತುಪ್ಪ, 11 ಸಾ.ರೂ. ಮೌಲ್ಯದ ಡ್ರೈಪ್ರುಟ್ಸ್, 8,500 ಸಾ.ರೂ. ಕಾಯಿನ್ ಸೇರಿದಂತೆ ಇತರ ಕೆಲವು ವಸ್ತುಗಳನ್ನು ಕಳ್ಳತನ ಮಾಡುವ ದೃಶ್ಯ ಅಂಗಡಿಯ ಸಿ.ಸಿ ಟಿವಿಯಲ್ಲಿ ದಾಖಲಾಗಿದೆ.
ಕಳವಾಗಿರುವ ವಸ್ತುಗಳ ಒಟ್ಟು ಮೌಲ್ಯ 1 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಬಂಟ್ವಾಳ ಬಡ್ಡಕಟ್ಟೆಯ ಹೊಟೇಲೊಂದರ ಮುಂಭಾಗದಲ್ಲಿ ನಿಲಗಲಿಸಲಾಗಿದ್ದ ವಾಹನ ಬೊಂದರಿಂದ 15 ಸಾ.ರೂ. ನಗದು ಕಳವು ಗೈಯಲಾಗಿತ್ತು. ಇದು ಕೂಡ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಬಂಟ್ವಾಳ, ಬಿ.ಸಿ.ರೋಡ್ ಪರಿಸರದಲ್ಲಿ ಕಳ್ಳತನ ಪ್ರಕರಣ ನಡೆಯುತ್ತಲೇ ಇದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಪೊಲೀಸರು ರಾತ್ರಿ ಗಸ್ತನ್ನು ಸಮರ್ಪಕವಾಗಿ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ.