ಕೂಡ್ಲು ಫಾಲ್ಸ್: ಬಿದ್ದು ಯುವಕ ಸಾವು
Friday, December 19, 2025
ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳ ಹೆಬ್ರಿ ಸಮೀಪದ ಪ್ರವಾಸಿ ತಾಣ ಕೂಡ್ಲು ಫಾಲ್ಸ್ ನಲ್ಲಿನ ಬಂಡೆಯ ಮೇಲಿನಿಂದ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಉಡುಪಿಯ ಕೊಂಜಾಡಿ ಮೂಲದ ಬೆಂಗಳೂರು ನಿವಾಸಿ ಸವಿತಾ ಪಿ. ಶೆಟ್ಟಿ ಎಂಬವರ ಮಗ ಮನ್ವಿತ್ (25) ಎಂದು ಗುರುತಿಸಲಾಗಿದೆ.
ಮನ್ವಿತ್ ಡಿ.12ರಂದು ತಮ್ಮ ಸ್ವಂತ ಮನೆಯಾದ ಕೊಂಜಾಡಿಗೆ ಬಂದಿದ್ದು, ಡಿ.14ರಂದು ತನ್ನ ಸ್ನೇಹಿತರೊಂದಿಗೆ ಹೆಬ್ರಿಯ ಕೂಡ್ಲು ಫಾಲ್ಸ್‌ಗೆ ಹೋಗಿದ್ದರು. ಅಲ್ಲಿ ಸ್ನೇಹಿತರು ಸ್ನಾನ ಮಾಡುತ್ತಿರುವಾಗ ಮನ್ವಿತ್ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ತಲೆ ತಿರುಗಿ ಕೆಳಗೆ ನೀರಿಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.17ರಂದು ಮೃತಪಟ್ಟಿದ್ದಾರೆ. ಮನ್ವಿತ್‌ಗೆ ಮೂರ್ಛೆ ರೋಗವಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.