ಅಪ್ರಾಪ್ತ ಬಾಲಕಿಯ ಅಪಹರಣಕ್ಕೆ ವಿಫಲ ಯತ್ನ-ಹಲ್ಲೆ: ದೂರು

ಅಪ್ರಾಪ್ತ ಬಾಲಕಿಯ ಅಪಹರಣಕ್ಕೆ ವಿಫಲ ಯತ್ನ-ಹಲ್ಲೆ: ದೂರು

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ ನಲ್ಲಿ ನಿಂತು ಬಂಧುಗಳಿಗಾಗಿ ಕಾಯುತ್ತಿರುವ ಕುಟುಂಬವೊಂದರ 7 ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಲು ವಿಫಲ ಯತ್ನ ನಡೆದಿದೆ. ಈ ಬಗ್ಗೆ ಬಾಲಕಿಯ ತಂದೆ ಕುಂದಾಪುರ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. 

ತೆಕ್ಕಟ್ಟೆಯ ಅಬ್ದುಲ್ ಲತಿಫ್ ಮೊಹಿದ್ದಿನ್ (39) ಎಂಬವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ ಘಟನೆಯ ವಿವರ ಹೀಗಿದೆ.

ಇವರು 2014 ರ ಅಕ್ಟೊಬರ್ 16 ರಂದು ಮಂಗಳೂರು ಕಂಕನಾಡಿಯ ರೂಹಿ ಶಮಾ ಎಂಬವರನ್ನು ವಿವಾಹವಾಗಿದ್ದರು. ಈ ಜೋಡಿ ಅಬುಧಾಬಿಯಲ್ಲಿ ವಾಸಿಸಿತ್ತು.  ಈ ದಂಪತಿಗೆ 7 ವರ್ಷದ ಮಗಳಿದ್ದಳು. 

ಸುಮಾರು ಮೂರು ವರ್ಷಗಳ ಹಿಂದೆ ಈ ಇಬ್ಬರೊಳಗೆ ಯಾವುದೋ ಕಾರಣದಿಂದ ವೈಮನಸ್ಸು ಉಂಟಾಗಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಹೀಗಿರಲು, ಅಬ್ದುಲ್ ಲತಿಫ್ ಮೊಹಿದ್ದಿನ್ ಇದೇ ಡಿ. 2 ರಂದು ಮಗಳೊಂದಿಗೆ ಅಬುಧಾಬಿಯಿಂದ ತೆಕ್ಕಟ್ಟೆಗೆ ಬಂದು ವಾಸಿಸತೊಡಗಿದ್ದರು. ಡಿ. 7 ರಂದು ಅವರ ಪತ್ನಿ ರೂಹಿ ಶಮಾ ಕೂಡಾ ಊರಿಗೆ ಬಂದು ಆಕೆಯ ತಾಯಿ ಮನೆಯಲ್ಲಿ ನೆಲೆಸಿದರು. 

ಈ ನಡುವೆ ರೂಹಿ ಶಮಾರಿಗೆ ತಮ್ಮ ಮಗಳನ್ನು ಕಾಣುವ ಬಯಕೆಯಾಗಿ ಪತಿಗೆ ಫೋನ್ ಮಾಡಿದರು. ಡಿ. 10 ರ ರಾತ್ರಿ 10.30 ರ ವೇಳೆಗೆ ತಮ್ಮ ಮಗಳಿಗೆ ತಾಯಿಯ ಭೇಟಿ ಮಾಡಿಸುವ ಬಗ್ಗೆ ಅಬ್ದುಲ್ ಲತಿಫ್ ಮೊಹಿದ್ದಿನ್ ಅವರು ಪುತ್ರಿ, ತಮ್ಮ ಅಣ್ಣ ಅಬ್ದುಲ್ ಖಾದರ್, ಅತ್ತಿಗೆ ಕಲಂದರ್ ಬಿಬಿ  ಹಾಗೂ ಪರಿಚಯದ ಆಸಿಫ್ ಮತ್ತು ಸಲಾಂ ಎಂಬವರೊಂದಿಗೆ ಕುಂದಾಪುರಕ್ಕೆ ಬಂದು ಶಾಸ್ತ್ರಿ ಸರ್ಕಲ್ ನಲ್ಲಿ ನಿಂತಿದ್ದರು. 

ರಾತ್ರಿ ಸುಮಾರು 11 ರ ವೇಳೆಗೆ ಅಬ್ದುಲ್ ರವರ ಪತ್ನಿ ರೂಹಿ ಶಮಾ, ರಿಯಾಸುದ್ದಿನ್ ಹಾಗೂ ಇತರ ನಾಲ್ವರು ಎರಡು ಕಾರುಗಳಲ್ಲಿ ಅಲ್ಲಿಗೆ ಬಂದಿಳಿದು ಏಕಾಏಕಿ   ಅಬ್ದುಲ್ ರ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಪಹರಿಸುವ ಉದ್ದೇಶದಿಂದ ಧಾವಿಸಿ ಬಂದರು. ಆಕೆಯ ತಂದೆ ಅಬ್ದುಲ್ ಲತಿಫ್ ಮೊಹಿದ್ದಿನ್ ಅವರೆಲ್ಲರನ್ನು ತಡೆದಾಗ ರಿಯಾಸುದ್ದೀನ್ ಇವರನ್ನು ಹತ್ಯೆ ಗೈಯ್ಯುವ ಉದ್ದೇಶದಿಂದ ಮರದ ಸೋಂಟೆಯಿಂದ ಥಳಿಸಿದ ಎನ್ನಲಾಗಿದೆ. ತಡೆಯಲು ಬಂದ ಅಸಿಫ್ ಗೂ ಹಲ್ಲೆ ನಡೆಸಲಾಗಿದೆ. ಎಲ್ಲರೂ ಸೇರಿ ಇವರಿಗೆಲ್ಲ ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಗಾಯಗೊಳಿಸಿದರು ಎನ್ನಲಾಗಿದೆ. ಅಸೀಫ್ ಮತ್ತವರ ಕಡೆಯವರು ಬೊಬ್ಬೆ ಹಾಕಿದಾಗ ಥಳಿಸುತ್ತಿದ್ದವರೆಲ್ಲ ಬಿಟ್ಟು, ಮರದ ಸೋಂಟೆಯೊಂದಿಗೆ ಕಾರಿನಲ್ಲಿ ಪರಾರಿಯಾದರು. ಕಾರಿನಲ್ಲಿ ಬಂದವರು ಸುಹೆಲ್ ಅಹಮದ್, ಸರ್ಫರಾಜ್, ಮಹಮದ್ ತನುಫ್ ಹಾಗೂ ಸೌಹಾನ್ ಎಂದು ಗುರುತಿಸಲಾಗಿದ್ದು, ಅಬ್ದುಲ್ ಲತಿಫ್ ಮೊಹಿದ್ದಿನ್ ಈ ಎಲ್ಲರ ವಿರುದ್ಧ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article