ಮಂಗಳೂರಿನ ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ-ರೋಗಿಗಳ ಜೀವದೊಂದಿಗೆ ಚೆಲ್ಲಾಟ: ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳದಿರುವ ಬಗ್ಗೆ ಶಾಸಕ ಕಾಮತ್ ಆಕ್ಷೇಪ
ಈ ಅಕ್ರಮದ ಬಗ್ಗೆ ತಿಳಿದ ಕೂಡಲೇ ಆಡಿಯೋ-ವೀಡಿಯೋ ಮಾತ್ರವಲ್ಲದೇ ಅವಧಿ ಮೀರಿದ ಔಷಧಿಗಳ ರಾಶಿಯ ದಾಖಲೆಗಳ ಸಮೇತ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಹಾಸನ, ಚಿಕ್ಕಮಗಳೂರು, ಸೇರಿದಂತೆ ವಿವಿಧ ಭಾಗದ ಅವಧಿ ಮೀರಿದ ಔಷಧಿಗಳನ್ನು ಏಜೆಂಟರ ಮುಖಾಂತರ ಮಂಗಳೂರಿಗೆ ತರುವ ವ್ಯವಸ್ಥಿತ ಜಾಲವಿದೆ. ಈ ಬಗ್ಗೆ ಲೋಕಾಯುಕ್ತ ದಾಳಿ ನಡೆದಿದ್ದರೂ ಯಾಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ? ಸರ್ಕಾರವೇ ಇವರ ರಕ್ಷಣೆಗೆ ನಿಂತಿದೆಯಾ? ಪೂರೈಕೆ ಮಾಡಿದ್ದು ಯಾರು? ಈ ಅಕ್ರಮದ ಹಿಂದಿರುವವರು ಯಾರು ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಮಂಗಳೂರಿನ ಆಯುಷ್ ಸಂಯುಕ್ತ ಆಸ್ಪತ್ರೆಯಲ್ಲಿ ಎಂ.ಆರ್.ಪಿ.ಎಲ್ ಕಂಪೆನಿಯವರು ಸಿ.ಎಸ್.ಆರ್ ಅನುದಾನದಡಿ ನೀಡಿದ 38.50 ಲಕ್ಷದಲ್ಲಿ ಅಕ್ರಮವಾಗಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಇಂತಹ ಅಕ್ರಮ ಎಸಗಲು ಅಧಿಕಾರಿಗಳಿಗೆ ಧೈರ್ಯ ಬರಲು ಹೇಗೆ ಸಾಧ್ಯ? ಅವರ ಹಿಂದೆ ಯಾರಿದ್ದಾರೆ? ಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾಕೆ ಕ್ರಮವಾಗಿಲ್ಲ? ಹೀಗಾದರೆ ಇನ್ನು ಮೇಲೆ ಯಾವ ಕಂಪೆನಿ ತಾನೇ ಇಂತಹ ಸರ್ಕಾರಿ ಸಂಸ್ಥೆಗಳಿಗೆ ಸಿ.ಎಸ್.ಆರ್ ಅನುದಾನವನ್ನು ನೀಡಲು ಮುಂದೆ ಬರುತ್ತದೆ ಎಂದು ಪ್ರಶ್ನಿಸಿದರು.