ಕುಂದಾಪುರ ನಗರ ಮಧ್ಯೆ ಅಗ್ನಿ ದುರಂತ ಅಂಗಡಿಗಳು ಭಸ್ಮ
Monday, December 29, 2025
ಕುಂದಾಪುರ: ನಗರದ ಶ್ರೀ ಪೇಟೆ ವೆಂಕಟರಮಣ ದೇವಸ್ಥಾನ ಸಮೀಪದ ಪುಸ್ತಕ ಮಳಿಗೆ ಹಾಗೂ ಪಟಾಕಿ ಮಳಿಗೆಗಳನ್ನು ಹೊಂದಿದ್ದ ಕಟ್ಟಡಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ದುರ್ಘಟನೆ ಡಿ.29 ರಂದು ಸೋಮವಾರ ನಡೆದಿದೆ.
ದೇವಸ್ಥಾನದ ಎದುರು ರಥಬೀದಿಯಲ್ಲಿರುವ ಪುಸ್ತಕ ಮಳಿಗೆ ಹಾಗೂ ಪಟಾಕಿ ಅಂಗಡಿಗೆ ನಸುಕಿನ 3 ಗಂಟೆಯ ವೇಳೆಗೆ ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು ಬೆಂಕಿ ನಂದಿಸಲು ಶ್ರಮಪಟ್ಟರು. ಕಟ್ಟಡದಲ್ಲಿದ್ದ ಮೂರು ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಪಟಾಕಿ ಅಂಗಡಿಯ ಸಾಲಿನ ಅಂಗಡಿಯೊಂದರಲ್ಲಿನ ಇನ್ವರ್ಟರ್ ನಿಂದ ಕಿಡಿ ಹಾರಿ ಬೆಂಕಿ ಹತ್ತಿಕೊಂಡಿದೆ, ಬೆಳಗಿನ ಜಾವವಾದ್ದರಿಂದ ಯಾರ ಗಮನಕ್ಕೂ ಬಾರದೇ ದೊಡ್ಡ ಜ್ವಾಲೆಯಾಗಿ ಹರಡಿದೆ ಎಂದು ಹೇಳಲಾಗಿದೆ.
ಕಳೆದ ವಾರವಷ್ಟೇ ಕೋಟೇಶ್ವರ ಪೇಟೆಯಲ್ಲಿನ ಪಂಚಾಯತ್ ಕಟ್ಟಡದ ಮಹಡಿಯ ತ್ಯಾಜ್ಯ ಸಂಗ್ರಹಾಗಾರಕ್ಕೆ ಬೆಂಕಿ ಬಿದ್ದು ನಷ್ಟ ಸಂಭವಿಸಿದ ಘಟನೆಯ ಬೆನ್ನಿಗೆ ಇದೀಗ ಕುಂದಾಪುರದಲ್ಲೂ ಅಗ್ನಿ ದುರಂತ ನಡೆದಿದೆ. ಎಲ್ಲಿಯೂ ಪ್ರಾಣಹಾನಿಯಾಗಿಲ್ಲ.