ದ.ಕ. ಜಿಲ್ಲೆಯಲ್ಲಿ 800 ಶಾಲೆ ಮುಚ್ಚಲು ಯತ್ನ: ವಿನಯ್ ಚಂದ್ರ
ಮಂಗಳೂರು: ರಾಜ್ಯದಲ್ಲಿ ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂದು ಹೇಳುತ್ತಿರುವ ರಾಜ್ಯ ಸರಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ 800 ಶಾಲೆಗಳನ್ನು ಮುಚ್ಚಲು ಪಟ್ಟಿ ಮಾಡಲಾಗಿದೆ. ಇದು ಶೈಕ್ಷಣಿಕ ವಲಯಕ್ಕೆ ಎದುರಾದ ಗಂಭೀರ ಹೊಡೆತ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ (ಎಐಡಿಎಸ್‌ಓ) ಮಂಗಳೂರು ಸಂಚಾಲಕ ವಿನಯ್ ಚಂದ್ರ ಹೇಳಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮ ಪಂಚಾಯತ್‌ಗೆ ಒಂದರಂತೆ ರಾಜ್ಯದಲ್ಲಿ ೬ ಸಾವಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ಇಲಾಖೆಯೇ ತಿಳಿಸಿದೆ. ಪೈಲೆಟ್ ಪ್ರೋಜೆಕ್ಟ್ ಆಗಿ ಕೆಲವು ಜಿಲ್ಲೆಯ ಶಾಲೆಗಳ ವಿಲೀನಗೊಳಿಸಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕೆಲವು ಶಾಲೆಯವರಿಗೆ ಮೌಖಿಕವಾಗಿಯೂ ತಿಳಿಸಲಾಗಿದೆ. ಕೆಲವು ಕಡೆಯಲ್ಲಿ ಸ್ಥಳೀಯರ ವಿರೋಧವೂ ವ್ಯಕ್ತವಾಗಿದೆ. ಮಕ್ಕಳಿದ್ದರೂ ಅಂತಹ ಶಾಲೆಗಳಿಗೆ
ಮೂಲಸೌಕರ್ಯಗಳನ್ನು ನೀಡದ ಸರಕಾರ ಶಾಲೆಯನ್ನೇ ಬಂದ್ ಮಾಡುವ ಯೋಜನೆ ಹಮ್ಮಿಕೊಂಡಿದ್ದು ಸರಿಯಲ್ಲ ಎಂದರು.
ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಉಪಸ್ಥಿತರಿದ್ದರು.